

ಹೈದರಾಬಾದ್: ಮಗನಿಗೆ ಕೆಲಸ ಇಲ್ಲ, ಆದರೂ ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿ ಬೀಳುತ್ತಾನೆ ಎನ್ನುವ ಸಿಟ್ಟಿನಿಂದಾಗಿ ಮಗನನ್ನೇ ಕೊಲೆ ಮಾಡಿದ್ದ ಅಪ್ಪನಿಗೆ ಹೈದರಾಬಾದ್ ನ್ಯಾಯಾಲಯ ಇದೀಗ ಏಳು ವರ್ಷಗಳ ಶಿಕ್ಷೆ ವಿಧಿಸಿದೆ.
ಹೈದರಾಬಾದ್ ನಿವಾಸಿ ಪಗಡಾಲ ಮೋಹನ್ ರಾವ್ (63) ಅವರಿಗೆ ನ್ಯಾಯಾಲಯ ಏಳು ವರ್ಷಗಳ ಕಠಿಣ ಶಿಕ್ಷೆ ಮತ್ತು 600 ರೂಪಾಯಿ ದಂಡವನ್ನು ವಿಧಿಸಿದೆ. ಈತ 2018ರಲ್ಲಿ ಸೆಪ್ಟೆಂಬರ್ 13ರಂದು ತನ್ನ ಮಗನನ್ನೇ ಕೊಲೆ ಮಾಡಿದ್ದ. ಅವರ ಮಗ ಮಹೇಂದ್ರ (28) ವಯಸ್ಕನಾಗಿದ್ದರೂ ಕೆಲಸಕ್ಕೆ ಸೇರಿರಲಿಲ್ಲ. ಆದರೆ ಪ್ರತಿದಿನ ಕುಡಿದು ಬರುತ್ತಿದ್ದನಂತೆ. ಕೊಲೆಯಾದ ದಿನವೂ ಆತ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದನಂತೆ. ಅದೇ ಸಿಟ್ಟಿನಿಂದ ಪಗಡಾಲ ಮಗನ ಎದೆ ಮತ್ತು ಹೊಟ್ಟೆಗೆ ಚುಚ್ಚಿ ಕೊಂದಿದ್ದಾನೆ. ಈ ಪ್ರಕರಣ ದಾಖಲಾಗಿದೆ ಎರಡು ವರ್ಷಗಳ ನಂತರ ಇದೀಗ ತೀರ್ಪು ಬಂದಿದ್ದು, ಅಪರಾಧಿ ಜೈಲು ಪಾಲಾಗಿದ್ದಾನೆ. (ಏಜೆನ್ಸೀಸ್)