

ತಮಿಳುನಾಡು: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಪ್ರಬಲವಾಗಿರುವ ಮೈಚಾಂಗ್ ಚಂಡಮಾರುತ ಇದೀಗ ತೀವ್ರವಾಗುತ್ತಿದ್ದು, ಈ ಹಿನ್ನಲೆ ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಡಿಸೆಂಬರ್ 5ರ ಮುಂಜಾನೆ ವೇಳೆಗೆ ದಕ್ಷಿಣ ಆಂಧ್ರಪ್ರದೇಶದ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಬಿರುಸಿನ ಚಂಡಮಾರುತವಾಗಿ ತಲುಪುವ ಸಾಧ್ಯತೆ ಹೆಚ್ಚಿದೆ. ಇದು ಗಂಟೆಗೆ 90-100 ಕಿಮೀ ವೇಗದಿಂದ 110 ಕಿಮೀ ವೇಗದಲ್ಲಿ ಬೀಸಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಣೆಯಲ್ಲಿ ತಿಳಿಸಿದೆ.
ಮೈಚಾಂಗ್ ಚಂಡಮಾರುತ ತಮಿಳುನಾಡಿನ ಕರಾವಳಿ ಪ್ರದೇಶಗಳನ್ನು ದಾಟುವ ನಿರೀಕ್ಷೆಯಿರುವುದರಿಂದ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಅದರಂತೆಯೇ ಬಿರುಸಿನ ಮಳೆ ಪ್ರಾರಂಭಗೊಂಡಿದೆ. ಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದ ರನ್‌ವೇ ಸದ್ಯ ಜಲಾವೃತಗೊಂಡಿದೆ.
ಚಂಡಮಾರುತದ ಎಚ್ಚರಿಕೆಯ ಕ್ರಮವಾಗಿ ಈಗಾಗಲೇ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಅವುಗಳಲ್ಲಿ ಕೆಲವು ಏರ್ಲೈನ್ಸ್ನ ಮಾರ್ಗಗಳನ್ನು ಬದಲಾಯಿಸಲಾಗಿದೆ. ಚೆನ್ನೈ ವಿಮಾನ ನಿಲ್ದಾಣದ ಸಂಪೂರ್ಣ ರನ್‌ವೇ ಮತ್ತು ಏರ್‌ಪ್ಲೇನ್ ಪಾರ್ಕಿಂಗ್ ವಲಯ ಮಳೆಯಿಂದ ಜಲಾವೃತಗೊಂಡಿದೆ.
ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿಯ ಸಮೀಪ ಮೈಚಾಂಗ್ ಚಂಡಮಾರುತವು ಸಮೀಪಿಸುತ್ತಿರುವ ಕಾರಣ ಸೋಮವಾರ (ಡಿ.04) ರಾತ್ರಿಯಿಡೀ ಚೆನ್ನೈನಲ್ಲಿ ಭಾರೀ ಮಳೆ ಸುರಿಯಲಿದೆ. ಮುಂದಿನ 24 ಗಂಟೆಗಳಲ್ಲಿ ನಗರದ ನೆರೆಯ ಜಿಲ್ಲೆಗಳು ಅಧಿಕ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ,(ಏಜೆನ್ಸೀಸ್).