ಅಧಿವೇಶನದಲ್ಲಿ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಪ್ರಕಟ ನಿರೀಕ್ಷೆ; ವಿಜಯೇಂದ್ರ ಹೇಳಿಕೆ

IMG-20231204-WA0012
Published on

ಬೆಳಗಾವಿ: ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಬ್ಬು ಬೆಳೆಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಉತ್ತರಕರ್ನಾಟಕದ ಜನರು, ಬಡವರು ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ಶುರುವಾಗಲಿರುವ ವಿಧಾನಮಂಡಲ ಅಧಿವೇಶನದತ್ತ ಗಮನ ಕೇಂದ್ರೀಕರಿಸಿದ್ದು, ರಾಜ್ಯ ಸರ್ಕಾರ ಸಿಹಿ ಸುದ್ದಿ ಪ್ರಕಟಿಸುವ ನಿರೀಕ್ಷೆಯಲ್ಲಿದ್ದಾರೆ. ವಿರೋಧ ಪಕ್ಷವಾಗಿ ಬಿಜೆಪಿ ಕೂಡ ಈ ನಿರೀಕ್ಷೆಗೆ‌ ಒತ್ತಾಸೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ಬೆಳಗಾವಿಗೆ ಬಂದಿಳಿದ ಅವರು ವಿಮಾನ ನಿಲ್ದಾಣದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಸರ್ಕಾರದಿಂದ ಸಮಸ್ಯೆಗಳಿಗೆ ಪರಿಹಾರ, ನಿರೀಕ್ಷೆಗೆ ಸ್ಪಂದನೆ ಬಯಸಿದ್ದೇವೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ರೈತರು, ಜನರ ಬವಣೆ ಕಡೆಗಣಿಸಿದ್ದರೆ, ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಟೀಕಿಸಿದರು.

ಸಮರ್ಥ ನಿರ್ವಹಣೆ

ಬಿಜೆಪಿ ಪ್ರತಿಪಕ್ಷವಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದೆ. ರೈತರು, ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳು, ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿ, ಪರಿಹಾರದ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಸದನದೊಳಗೆ ರಚನಾತ್ಮಕವಾಗಿ ಕೆಲಸ ಮಾಡಲಿದೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾನವಿತ್ತರು.

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಜಯಭೇರಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ಕಾಂಗ್ರೆಸ್ ಪಕ್ಷದ ಪೊಳ್ಳು ಗ್ಯಾರಂಟಿಗಳನ್ನು ಜನರು ಸಾರಾಸಗಟು ತಿರಸ್ಕರಿಸಿದ್ದಾರೆ. ಪೊಳ್ಳು ಗ್ಯಾರಂಟಿಗಳನ್ನು ದೇಶವ್ಯಾಪಿ ಹರಡಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಹಾಗೂ ಐಎನ್ ಡಿಐಎ ಒಕ್ಕೂಟ‌ ಹವಣಿಸಿದ್ದವು. ಆದರೆ ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಅಭಿವೃದ್ಧಿ ಹಾಗೂ ರಕ್ಷಣೆಯ ಗ್ಯಾರಂಟಿ ಬಯಸಿರುವುದು ಸ್ಪಷ್ಟವಾಗಿದೆ ಎಂದರು.

ದೂಳೀಪಟ ನಿಶ್ಚಿತ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಒಂದಾಗಿ ಸ್ಪರ್ಧಿಸಲಿದ್ದೇವೆ. ಜನಪರ ವಿಷಯಗಳನ್ನು ಮುಂದಿಟ್ಟು ಜನರ ಬಳಿಗೆ ತೆರಳುತ್ತೇವೆ. ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರು ಭ್ರಮನಿರಸನರಾಗಿದ್ದಾರೆ. ಕಾಂಗ್ರೆಸ್ ಪಕ್ಷ ದೂಳೀಪಟವಾಗುವುದು ನಿಶ್ಚಿತವೆಂದು ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net