ಯುಪಿಐ ಬಳಕೆದಾರರ ಗಮನಕ್ಕೆ! ಫೆ.01ರಿಂದ ಈ ರೀತಿಯ ಪಾವತಿಗಳು​ ಸ್ವೀಕಾರ ಆಗಲ್ಲ | UPI Payments

ವಿಜಯವಾಣಿ - 2025-01-30T091355.633
Published on

UPI Payments: ಶರವೇಗದ ಡಿಜಿಟಲ್ ಯುಗಕ್ಕೆ ಒಗ್ಗಿಕೊಳ್ಳುವುದು ಇಂದು ಅನಿವಾರ್ಯ. ಅದರಲ್ಲೂ ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳು ಜನರನ್ನು ಸೆಳೆಯುವುದರ ಜತೆಗೆ ಅವರ ದಿನನಿತ್ಯದ ಕೆಲಸಗಳನ್ನು ಮತ್ತಷ್ಟು ಸುಲಭ ಹಾಗೂ ಸರಳಗೊಳಿಸುತ್ತಿದೆ. ಈ ಪೈಕಿ ಯುಪಿಐ ಪೇಮೆಂಟ್ಸ್​ ಆ್ಯಪ್​ಗಳು ಹೆಚ್ಚು ಸದ್ದು ಮಾಡುತ್ತಿವೆ. ಇಂದು 100ರಲ್ಲಿ ಶೇ.75ರಷ್ಟು ಮಂದಿ ಆನ್​ಲೈನ್​ ಪಾವತಿಗಳ ಬಳಕೆಯನ್ನು ಮಾಡುತ್ತಿದ್ದಾರೆ. ಇಂತಹ ಉಪಯುಕ್ತ ಡಿಜಿಟಲ್​ ಸೇವೆಗಳ ಸದುಪಯೋಗವನ್ನು ಜನರು ಕೇವಲ ತಮ್ಮ ಬೆರಳಂಚಿನಲ್ಲಿ ಪಡೆಯುತ್ತಿದ್ದಾರೆ. ಆದ್ರೆ, ಮಾಹಿತಿಗಳ ಪ್ರಕಾರ, ಫೆಬ್ರವರಿ 1ರಿಂದ ನೀವು ಈ ಹಿಂದೆ ಮಾಡುತ್ತಿದ್ದ ಯುಪಿಐ ಪಾವತಿಗಳನ್ನು ಇನ್ಮುಂದೆ ಮಾಡಲು ಸಾಧ್ಯವಾಗುವುದಿಲ್ಲ. ಏಕೆ ಎಂದು ಯೋಚಿಸುತ್ತಿದ್ದೀರಾ? ಉತ್ತರವಿದೆ, ಖಂಡಿತ ಇದಕ್ಕೆ ಉತ್ತರ ಇಲ್ಲಿದೆ, ಹೀಗಿದೆ.

ಯುಪಿಐ ಪಾವತಿಗಳನ್ನು ಬಹಳ ತ್ವರಿತವಾಗಿ ಮತ್ತು ಸುಲಭವಾಗಿ ಮಾಡಬಹುದಾಗಿದೆ. ಕೇವಲ ಒಂದು ಕ್ಯೂಆರ್ ಕೋಡ್​ ಸ್ಕ್ಯಾನರ್​ ಅಥವಾ ಯಾರಿಗೆ ಹಣ ಕಳಿಸಬೇಕು ಅವರ ಫೋನ್ ನಂಬರ್ (ಬ್ಯಾಂಕ್ ಖಾತೆಗೆ ಲಿಂಕ್​ ಮಾಡಲಾದ) ಅನ್ನು ನಮೂದಿಸಿದರೆ ಸಾಕು ಸುಲಭವಾಗಿ, ಕ್ಷಣಮಾತ್ರದಲ್ಲಿ ಹಣ ಹಾಕಬಹುದು. ಇಂತಹ ಆ್ಯಪ್​ನಲ್ಲಿ ಪಾವತಿ ಪ್ರಕ್ರಿಯೆಯು ತುಂಬಾ ಸುರಕ್ಷಿತವಾಗಿದೆ. ಯುಪಿಐ ಖಾತೆಯ ಮೂಲಕ ವೈಯಕ್ತಿಕ ಬ್ಯಾಂಕಿಂಗ್ ಪಾವತಿಗಳನ್ನು ಮಾತ್ರವಲ್ಲದೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳು, ಆನ್‌ಲೈನ್ ಇ-ಕಾಮರ್ಸ್ ಪೇಮೆಂಟ್​ಗಳನ್ನು ಸಹ ಮಾಡಬಹುದು. ಇಂತಹ ಡಿಜಿಟಲ್ ಪಾವತಿಗಳ ವೈಶಿಷ್ಟ್ಯಗಳಲ್ಲಿ ವಹಿವಾಟು ಪ್ರಕ್ರಿಯೆಯು ಅತ್ಯಂತ ಸರಳ ಹಾಗೂ ವೇಗವಾಗಿದೆ.

ತ್ವರಿತ ಡಿಜಿಟಲ್ ಪೇಮೆಂಟ್ಸ್​

ಪ್ರಸ್ತುತ, ಎಲ್ಲಾ ಬ್ಯಾಂಕುಗಳು ಯುಪಿಐ ಸೇವೆಗಳನ್ನು ಒದಗಿಸುತ್ತಿವೆ. ಇದರ ಬಳಕೆಗೆ ಯಾವುದೇ ದಾಖಲೆಗಳ ಅಗತ್ಯವಿಲ್ಲ. ಕೇವಲ ಬ್ಯಾಂಕಿನ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡರೆ ಸಾಕು ಇನ್ನು ಉಳಿದ ಕೆಲಸಗಳು ಸುಗಮವಾಗುತ್ತವೆ. ಯುಪಿಐ ಮೂಲಕ ಪಾವತಿಗಳನ್ನು ಮಾಡುವುದು, ಸ್ವೀಕರಿಸುವುದು, ಮೊಬೈಲ್ ರೀಚಾರ್ಜ್‌ಗಳು, ಬಿಲ್ ಪಾವತಿ ಸೇರಿದಂತೆ ಇತರ ಆನ್‌ಲೈನ್ ಸೇವೆಗಳನ್ನು ಪಡೆಯಲು ಇದು ಉಪಯುಕ್ತವಾಗಿದೆ. ಯುಪಿಐ ಸೇವೆಗಳು ಅನೇಕ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ ಗೂಗಲ್ ಪೇ, ಫೋನ್ ಪೇ, ಭಾರತ್​ ಪೇ ಹೀಗೆ ಹಲವು ಹೆಸರಾಂತ ಆ್ಯಪ್​ಗಳಿಂದ ಜನರಲ್ಲಿ ಬಳಕೆಯ ಅಗತ್ಯತೆಯನ್ನು ಹೆಚ್ಚಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಯುಪಿಐ ಒಂದು ಡಿಜಿಟಲ್ ಪಾವತಿ ವ್ಯವಸ್ಥೆ. ಇದು ಒಬ್ಬ ಬಳಕೆದಾರರಿಂದ ಮತ್ತೊಬ್ಬ ಬಳಕೆದಾರರಿಗೆ ಸುಲಭವಾಗಿ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಅಸಲಿಗೆ ಮುಂದಿನ ತಿಂಗಳಿನಿಂದ ಈ ಪೇಮೆಂಟ್ಸ್​ನಲ್ಲಿ ಕೊಂಚ ಬದಲಾವಣೆಯಾಗಲಿದ್ದು, ಹಿಂದಿನ ರೀತಿಯಲ್ಲಿ ಮಾಡಲಾಗುತ್ತಿದ್ದ ಕೆಲವು ಐಡಿಯ ಪೇಮೆಂಟ್​ಗಳನ್ನು ಫೆ.01ರಿಂದ ಸ್ವೀಕರಿಸಲಾಗುವುದಿಲ್ಲ. ಅಂದರೆ ಅಂತಹ ಪಾವತಿಗಳನ್ನು ಯುಪಿಐ ಪರಿಗಣಿಸುವುದಿಲ್ಲ. ಬದಲಿಗೆ ರದ್ದುಗೊಳಿಸಲಿದೆ. ವಿಶೇಷ ಅಕ್ಷರಗಳನ್ನು ಹೊಂದಿರುವ ಎಲ್ಲಾ ವಹಿವಾಟು ಐಡಿಗಳನ್ನು ಕೇಂದ್ರ ವ್ಯವಸ್ಥೆಯು ನಿರಾಕರಿಸಲಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಇತ್ತೀಚೆಗೆ ಪ್ರಕಟಿಸಿದ ಸುತ್ತೋಲೆಯಲ್ಲಿ ಒತ್ತಿ ಹೇಳಿದೆ.

ಫೆ.01ರಿಂದ ಈ ವಹಿವಾಟುಗಳು ಕಾರ್ಯನಿರ್ವಹಿಸಲ್ಲ

ಯುಪಿಐ ವ್ಯವಸ್ಥೆಯ ಮೂಲಕ ನಮೂದಿಸಲಾದ ವಹಿವಾಟುಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ಗಳೊಂದಿಗೆ ಪೂರ್ಣಗೊಳಿಸಬಹುದು. ಫೆಬ್ರವರಿ 1, 2025ರಿಂದ ಯುಪಿಐ ವಹಿವಾಟುಗಳಿಗೆ ವಿಶೇಷ ಅಕ್ಷರಗಳನ್ನು ಹೊಂದಿರುವ ವಹಿವಾಟು ಐಡಿಗಳನ್ನು ಅನುಮತಿಸಲಾಗುವುದಿಲ್ಲ. ಅಸಲಿಗೆ ಇದು ರದ್ದಾಗಲಿದೆ ಎಂದು ಎನ್‌ಪಿಸಿಐ ಸುತ್ತೋಲೆಯಲ್ಲಿ ಪ್ರಕಟಿಸಿದೆ. ಅದರ ಪ್ರಕಾರ, ಯುಪಿಐ ಐಡಿಗಳಲ್ಲಿ ಆಲ್ಫಾನ್ಯೂಮರಿಕ್ ಮತ್ತು ಸಂಖ್ಯೆಗಳನ್ನು ಹೊಂದಿರುವ ವಹಿವಾಟು ಐಡಿಗಳನ್ನು ಮಾತ್ರ ಅನುಮತಿಸಲಾಗುವುದು ಎಂದು ಎನ್‌ಪಿಸಿಐ ಹೇಳಿದೆ. ಈ ಹೊಸ ಬದಲಾವಣೆಗಳೊಂದಿಗೆ ಎಲ್ಲಾ ಯುಪಿಐ ಸಿಸ್ಟಮ್ ಪಾಲುದಾರರು ತಮ್ಮ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದೆ.

UPI ಐಡಿಗಳಲ್ಲಿ ಈ ವಿಶೇಷ ಕೋಡ್‌ ಬಳಕೆ ಬೇಡ

ಪ್ರತಿ ಯುಪಿಐ ಪಾವತಿಗೆ ವಿಶೇಷ ವಹಿವಾಟು ಐಡಿ ಇರುತ್ತದೆ. ವಾಸ್ತವವಾಗಿ, ಯುಪಿಐ ಐಡಿಗಳನ್ನು ನೀವು ಇಷ್ಟಪಡುವಂತೆ ರಚಿಸಬಹುದು. ಸಾಮಾನ್ಯವಾಗಿ, ಯುಪಿಐ ಖಾತೆ ಐಡಿಗಳು ಅಕ್ಷರಗಳು ಮತ್ತು ಸಂಖ್ಯೆಗಳನ್ನು ಹೊಂದಿರುತ್ತವೆ. ಕೆಲವೊಮ್ಮೆ, ವಿಶೇಷ ಅಕ್ಷರಗಳು ಸಹ ಇರಬಹುದು. ಉದಾಹರಣೆಗೆ: (#, $, &, *, @, % ) ಇತ್ಯಾದಿ. ಈ ವಿಶೇಷ ಅಕ್ಷರಗಳನ್ನು ಹೊಂದಿರುವ ಯುಪಿಐ ಐಡಿಗಳನ್ನು ಫೆಬ್ರವರಿ 1ರಿಂದ ಯುಪಿಐ ವ್ಯವಸ್ಥೆಯು ಅನುಮತಿಸುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ. ತಾಂತ್ರಿಕ ವೈಶಿಷ್ಟ್ಯಗಳಿಗೆ ಅನುಗುಣವಾಗಿ ಈ ಹೊಸ ಬದಲಾವಣೆಯನ್ನು ಜಾರಿಗೆ ತರಲಾಗುವುದು ಎಂದು ಎನ್​ಪಿಸಿಐ ಬಹಿರಂಗಪಡಿಸಿದೆ.

ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟುಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, 16.73 ಬಿಲಿಯನ್ ಯುಪಿಐ ವಹಿವಾಟುಗಳನ್ನು ಮಾಡಲಾಗಿದೆ. ಈ ವಹಿವಾಟುಗಳ ಒಟ್ಟು ಮೌಲ್ಯವು 23.25 ಲಕ್ಷ ಕೋಟಿ ರೂ. ತಲುಪಿದೆ ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ. 8 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಈಗಿನ ಹೊಸ ಬದಲಾವಣೆಗಳು ವಹಿವಾಟುಗಳಲ್ಲಿ ಯಾವುದೇ ವಂಚನೆ ನಡೆಯದಿರಲು ಸಹಾಯ ಮಾಡಲಿದೆ. ಅಂತಹ ವಂಚನೆಗಳನ್ನು ತಡೆಗಟ್ಟಲು ಈ ಹೊಸ ನೀತಿಯನ್ನು ಪರಿಚಯಿಸಲಾಗಿದೆ ಎಂದು ಎನ್​ಪಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ಜಂಪ್ಡ್ ಠೇವಣಿ ಹಗರಣಗಳ ಹಿನ್ನೆಲೆಯಲ್ಲಿ, ಯುಪಿಐ ಬಳಕೆದಾರರು ಈ ರೀತಿಯ ಪಿನ್ ನಮೂದಿಸುವ ಮೂಲಕ ಮಾತ್ರ ವಹಿವಾಟುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಎನ್​ಪಿಸಿಐ ಹೇಳಿದೆ. ಈ ಹೊಸ ಬದಲಾವಣೆಗಳಿಗೆ ಅನುಗುಣವಾಗಿ, ಯುಪಿಐ ಬಳಕೆದಾರರು ತಮ್ಮ ವಹಿವಾಟುಗಳನ್ನು ಬಹಳ ವೇಗವಾಗಿ ಮತ್ತು ಅತ್ಯಂತ ಸುರಕ್ಷಿತವಾಗಿ ನಡೆಸಲು ಸಾಧ್ಯವಾಗುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net