

Maha Kumbh Stampede: ನಿನ್ನೆ (ಜ.29) ಮೌನಿ ಅಮಾವಾಸ್ಯೆ ದಿನ 10 ಕೋಟಿಗೂ ಅಧಿಕ ಸಂಖ್ಯೆಯ ಭಕ್ತಾಧಿಗಳು ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾಗಕ್ಕಾಗಿ ಮುಗಿಬಿದ್ದ ಹಿನ್ನೆಲೆ ಕಾಲ್ತುಳಿತ ಉಂಟಾಗಿ 30 ಮಂದಿ ಸಾವನ್ನಪ್ಪಿದರೆ, 60ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಮೃತಪಟ್ಟವರ ಶವದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
"ಜ.29ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ತ್ರಿವೇಣಿ ಸಂಗಮದತ್ತ ಆಗಮಿಸಿದ ಕಾರಣ ನೂಕುನುಗ್ಗಲು ಉಂಟಾಯಿತು. ಬ್ಯಾರಿಕೇಡ್ಗಳನ್ನು ಮುರಿದು ಒಂದಷ್ಟು ಮಂದಿ ಒಳಗೆ ಪ್ರವೇಶಿಸಿದ ಹಿನ್ನೆಲೆ ಕಾಲ್ತುಳಿತವಾಗಿದೆ. 30 ಮಂದಿ ಸಾವಿಗೀಡಾಗಿದ್ದು, 60ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಡಿಐಜಿ ವೈಭವ್ ವಿಷ್ಣು ಹೇಳಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟ ಭಕ್ತರಿಗೆ ಸಂತಾಪ ಸೂಚಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ತುರ್ತು ಕ್ರಮಗಳನ್ನು ಜಾರಿಗೊಳಿಸುವುದರ ಜತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧಂಖರ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಪಕ್ಷಾತೀತ ವಿರೋಧ ಪಕ್ಷದ ನಾಯಕರು ಮೃತರು ಹಾಗೂ ಅವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ,(ಏಜೆನ್ಸೀಸ್).