ವರ್ಷಪೂರ್ತಿ ಹಣಕೂಡಿಟ್ಟು ಕುಂಭಮೇಳಕ್ಕೆ ಹೋಗಿದ್ದರು; ಹಠಹಿಡಿದು ಹೋದ ತಾಯಿ-ಮಗಳ ದುರಂತ ಅಂತ್ಯ, ಮೇಘಾ ಮದುವೆಗೆ ನಡೆದಿತ್ತು ಸಿದ್ಧತೆ

Kumbh Mela Stampede
Published on

ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ 140 ವರ್ಷಕ್ಕೊಮ್ಮೆ ಜರುಗುವ ಕುಂಭಮೇಳದಲ್ಲಿ ಪಾಲ್ಗೊಳ್ಳಬೇಕು ಎಂಬ ಕನಸು ಕಟ್ಟಿಕೊಂಡು ಒಂದು ವರ್ಷದ ದುಡಿಮೆ ಕೂಡಿಟ್ಟು, ಮಹಾಕುಂಭ ಮೇಳಕ್ಕೆ ಹೋಗಿದ್ದರು ವಡಗಾವಿ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ. ಆದರೆ, ವಿಧಿಯಾಟ ತಾಯಿ-ಮಗಳನ್ನು ಕಾಲ್ತುಳಿತದಲ್ಲಿ ಬಲಿ ಪಡೆಯಿತು.

ದೈವಭಕ್ತೆಯಾಗಿದ್ದ ಮೇಘಾ ಹತ್ತರವಾಠ ನಾನು ಕುಂಭ ಮೇಳಕ್ಕೆ ಹೋಗಿ ಎಲ್ಲರಿಗೂ ವಿಡಿಯೋ ಕಾಲ್ ಮಾಡಿ ಅಲ್ಲಿಯ ಚಿತ್ರಣ ತೋರಿಸುತ್ತೇನೆ ಎಂದು ಹೇಳಿ ಹೋಗಿದ್ದಳು. ಅದರಂತೆ ಕುಟುಂಬಸ್ಥರಿಗೆ ಸೋಮವಾರ ವಿಡಿಯೋ ಕಾಲ್ ಮಾಡಿ ಬಹಳ ಜನ ಸೇರಿದ್ದಾರೆ ನೀವೆಲ್ಲ ಬನ್ನಿ ಎಂದು ಹೇಳಿದ್ದಳು. ಅಲ್ಲದೇ, ಕುಂಭಮೇಳದಲ್ಲಿ ಒಬ್ಬರೊಬ್ಬರನ್ನು ಕೈಬಿಡಬೇಡಿ, ತಪ್ಪಿಸಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸುವಂತೆ ಭಕ್ತರಲ್ಲಿ ಜಾಗೃತಿ ಮೂಡಿಸುತ್ತಿದ್ದಳು. ಆದರೆ, ಏಕಾಏಕಿ ಕಾಲ್ತುಳಿತ ಸಂಭವಿಸಿದ್ದರಿಂದ ತಾಯಿಯನ್ನು ರಕ್ಷಿಸಲು ಹೋಗಿ ಮೃತಪಟ್ಟಿದ್ದಾಳೆ. ಮಾರ್ಚ್​ನಲ್ಲಿ ಮಗಳ ಮದುವೆ ಮಾಡುತ್ತೇನೆ, ಹುಡುಗನನ್ನು ನೋಡುತ್ತಿದ್ದೀವಿ ಎಂದು ಹೇಳಿ ಹೋದ ತಾಯಿ-ಮಗಳು ವಾಪಸ್ ಬರಲಿಲ್ಲ ಎಂದು ತಂದೆ ದೀಪಕ ಹತ್ತರವಾಠ, ಕುಟುಂಬ ಸದಸ್ಯರು, ಸಂಬಂಧಿಕರು ನೆನೆದು ಕಣ್ಣೀರು ಹಾಕಿದ್ದಾರೆ.

ಮಗ ಮೃತಪಟ್ಟಿಲ್ಲ ಎಂಬ ನಿರೀಕ್ಷೆ: ಇನ್ನು ನಾನು ಎಷ್ಟು ದಿನ ಬದುಕುತ್ತೇನೆ ಎಂಬುವುದು ಗೊತ್ತಿಲ್ಲ. ಅಷ್ಟರ ಒಳಗಾಗಿ ಕುಂಭಮೇಳದಲ್ಲಿ ಭಾಗವಹಿಸಿ ಬರುತ್ತೇನೆ. ಅಲ್ಲಿಂದ ವಾಪಸ್ ಬಂದರೆ ಇನ್ನೂ 40 ವರ್ಷ ಬದುಕುತ್ತೇನೆ ಎಂದು ಹೇಳಿ ಹೋಗಿದ್ದ ಅರುಣ ಕೋರ್ಪಡೆ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾನೆ ಎಂದು ಸುದ್ದಿ ಕೇಳಿ ಕುಟುಂಬ ಆಘಾತಕ್ಕೊಳಗಾಗಿದೆ. ಅರುಣ ಕೋರ್ಪಡೆ ಮೃತಪಟ್ಟಿಲ್ಲ. ಬದುಕಿ ಬರುತ್ತಾನೆ ಎಂದು ಹೇಳುತ್ತಾ ಕೋರ್ಪಡೆ ಕುಟುಂಬ ಸದಸ್ಯರು, ಸಂಬಂಧಿಕರು ಕಣ್ಣೀರು ಸುರಿಸುತ್ತಿದ್ದಾರೆ.

ವಿಮಾನ ದರ ಪರಿಷ್ಕರಣೆಗೆ ಮನವಿ: ಪ್ರಯಾಗ್​ರಾಜ್​ಗೆ ಹೋಗುವ ವಿಮಾನಗಳ ದರವನ್ನು ಅತಿಯಾಗಿ ಏರಿಕೆ ಮಾಡಿರುವುದರಿಂದ ಮಹಾ ಕುಂಭಮೇಳಕ್ಕೆ ಭೇಟಿ ನೀಡುವ ಭಕ್ತರು ಅನನುಕೂಲತೆ ಎದುರಿಸುತ್ತಿದ್ದಾರೆ. ತಕ್ಷಣ ವಿಮಾನಯಾನ ಸಂಸ್ಥೆಗಳು ದರ ಪರಿಷ್ಕರಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವನ್ನು ಆಗ್ರಹಿಸಿದ್ದಾರೆ. ವಿಮಾನಯಾನ ಕಂಪನಿಗಳು ಸಂದರ್ಭದ ಲಾಭ ಪಡೆದು ಶೇ. 200ರಿಂದ ಶೇ. 700ವರೆಗೂ ದರ ಹೆಚ್ಚಿಸಿವೆ. ವಿಮಾನಯಾನ ಕಂಪನಿಗಳು ತಮ್ಮ ದರಗಳನ್ನು ಮಿತಿಗೊಳಿಸಬೇಕು ಮತ್ತು ಸೇವೆಗಳನ್ನು ವಿಸ್ತರಿಸಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಗಮನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಸ್ತೆಯಲ್ಲೇ ಪರದಾಟ: ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಬೇಕು ಎಂದು ಬೆಳಗಾವಿಯಿಂದ 80ಕ್ಕೂ ಅಧಿಕ ಜನರು ತೆರಳಿದ್ದಾರೆ. ಈ ತಂಡದಲ್ಲಿ ಬೈಲಹೊಂಗಲ, ಗೋಕಾಕ, ಹುಕ್ಕೇರಿ, ಬೆಂಗಳೂರು, ಹೊದೂರು ಚಿಕ್ಕೋಪ್ಪ ಸೇರಿ ಇತರ ಭಾಗಗಳಿಂದ ಭಕ್ತರು ಸೇರಿದ್ದಾರೆ. ಬೈಲಹೊಂಗದಿಂದ ಹೋಗಿರುವ ವಾಹನ ರಸ್ತೆ ಮಧ್ಯೆ ಇದ್ದು, ಇಲ್ಲಿ ಇರುವವರು ಎಲ್ಲರೂ ಸುರಕ್ಷಿತವಾಗಿದ್ದಾರೆ. ಊಟ, ನೀರಿನ ವ್ಯವಸ್ಥೆಯನ್ನು ಇವರು ಮಾಡಿಕೊಂಡಿದ್ದಾರೆ. ಈ ತಂಡದಲ್ಲಿ ಅರ್ಧಕ್ಕೂ ಅಧಿಕ ಜನರು ಮಹಿಳೆಯರೇ ಇದ್ದಾರೆ. ಮಕ್ಕಳು, ವೃದ್ಧರು ಸಹಿತ ಇದ್ದಾರೆ. ಆದರೆ 140 ಕಿ.ಮೀ. ಹಿಂದಿನಿಂದಲೇ ಸಂಚಾರ ದಟ್ಟಣೆ ಉಂಟಾಗಿರುವುದರಿಂದ ಯಾತ್ರಾರ್ಥಿಗಳು ಪರದಾಡುವಂತಾಗಿದೆ.

ಕುಂಭಮೇಳದ ಪುಣ್ಯಸ್ನಾನದ ಬಗ್ಗೆ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ಅವರಿಗೆ ಟೀಕೆ ಮಾಡುವುದೇ ಕೆಲಸವಾಗಿದೆ. ಎಐಸಿಸಿ ಅಧ್ಯಕ್ಷರು ಮಾಡಿದ ಪದ ಬಳಕೆ ಸರಿಯಿಲ್ಲ. ಕುಂಭಮೇಳದಲ್ಲಿ ಕಾಲ್ತುಳಿತದಿಂದ ಭಕ್ತಾದಿಗಳು ಮೃತಪಟ್ಟಿರುವುದು ನೋವು ತಂದಿದೆ. ಯಾರಿಗೇ ಸಮಸ್ಯೆ ಆಗಿದ್ದರೂ ನನ್ನನ್ನು ಸಂಪರ್ಕ ಮಾಡಲು ಹೇಳಿದ್ದೇನೆ.

| ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net