

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಹೊಸದೊಂದು ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ನಾಡಿದ್ದು ಶುಕ್ರವಾರ (ಡಿ.9) ಪುನೀತ್ ಅಭಿನಯದ 'ಸಿವಿಲ್ ಇಂಜಿನಿಯರ್' ಎಂಬ ಚಿತ್ರ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಸ್ವರಾಗೆ ಮಾತೇ ಮುಳುವಾಯಿತಾ? ನಿಲುವೇ ಶತ್ರುವಾಯಿತಾ?
ಆಶ್ಚರ್ಯವಾಗಬಹುದು. ಏಕೆಂದರೆ, ಪುನೀತ್ ಅಭಿನಯದ ಎಲ್ಲ ಚಿತ್ರಗಳು ಬಿಡುಗಡೆಯಾಗಿವೆ. ಇದೊಂದೇ ವರ್ಷ ಪುನೀತ್ ಅಭಿನಯದ 'ಜೇಮ್ಸ್', 'ಲಕ್ಕಿ ಮ್ಯಾನ್' ಮತ್ತು 'ಗಂಧದ ಗುಡಿ' ಚಿತ್ರಗಳು ಬಿಡುಗಡೆಯಾಗಿವೆ. ಇದಲ್ಲದೆ, ಪುನೀತ್ ಒಂದಿಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದರೂ, ಯಾವುದರಲ್ಲೂ ನಟಿಸಿರಲಿಲ್ಲ. ಅವರ ಅಕಾಲಿಕ ಮರಣದಿಂದಾಗಿ ಆ ಚಿತ್ರಗಳೆಲ್ಲ ನಿಂತು ಹೋಗಿವೆ. ಹೀಗಿರುವಾಗ, ಈ 'ಸಿವಿಲ್ ಇಂಜಿನಿಯರ್' ಯಾವುದು ಎಂಬ ಪ್ರಶ್ನೆ ಸಹಜ.
2016ರಲ್ಲಿ ಪುನೀತ್ ಅಭಿನಯದ 'ಚಕ್ರವ್ಯೂಹ' ಚಿತ್ರ ಬಿಡಗುಡೆಯಾಗಿದ್ದು ನೆನಪಿರಬಹುದು. ಶರವಣನ್ ನಿರ್ದೇಶನದ ಈ ಚಿತ್ರದಲ್ಲಿ ಅರುಣ್ ವಿಜಯ್, ಸಿತಾರಾ, ರಚಿತಾ ರಾಮ್, ಅಭಿಮನ್ಯು ಸಿಂಗ್ ಮುಂತಾದವರು ನಟಸಿದ್ದರು. ಈಗ ಅದೇ ಚಿತ್ರವೇ ತೆಲುಗಿನಲ್ಲಿ 'ಸಿವಿಲ್ ಇಂಜಿನಿಯರ್' ಎಂಬ ಹೆಸರಿನಲ್ಲಿ ಡಬ್ ಆಗಿದೆ. ಇದಕ್ಕೂ ಮುನ್ನ, ಈ ಚಿತ್ರ ಹಿಂದಿಗೆ ಡಬ್ ಆಗಿತ್ತು. ಈಗ ತೆಲುಗಿನಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ.
ಅಂದಹಾಗೆ, ಈ ಚಿತ್ರವು ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಪಾವಗಡ ಮುಂತಾದ ಕಡೆ ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗುವ ಸಾಧ್ಯತೆ ಇದೆ.