

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಬ್ಬರ ನಿಶ್ಚಿತಾರ್ಥ ಇತ್ತೀಚೆಗಷ್ಟೇ ಮುಗಿದಿದೆ. ಇನ್ನು, ಇಬ್ಬರೂ 2023ರ ಫೆಬ್ರವರಿಯಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೆ. ಎಲ್ಲ ಸರಿ, ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ ಎಂಬ ವಿಷಯ ಮಾತ್ರ ರಹಸ್ಯವಾಗಿಯೇ ಇತ್ತು. ಈಗ ಆ ವಿಷಯದ ಬಗ್ಗೆ ಹರಿಪ್ರಿಯಾ ಮೊದಲ ಬಾರಿಗೆ ಮಾತನಾಡಿದ್ದು, ಅವರಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದು ಕ್ರಿಸ್ಟಲ್ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅಮಾಯಕನ ‘ವಿಚಾರಣೆ’; ಪೊಲೀಸರ ಚಿತ್ರಹಿಂಸೆ …
ಇಷ್ಟಕ್ಕೂ ಈ ಕ್ರಿಸ್ಟಲ್ ಯಾರು ಗೊತ್ತಾ? ಒಂದು ನಾಯಿಮರಿ. ಈ ವಿಷಯವನ್ನು ಖುದ್ದು ಹರಿಪ್ರಿಯಾ ಹೇಳಿಕೊಂಡಿದ್ದಾರೆ. ತಮ್ಮ ಲವ್ಸ್ಟೋರಿ ಶುರುವಾಗಿದ್ದು ಹೇಗೆ ಎಂಬುದನ್ನು ಒಂದು ವಿಡಿಯೋದಲ್ಲಿ ವಿವರಿಸಿದ್ದಾರೆ. ಆ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ.
ವಿಷಯವೇನೆಂದರೆ, ಹರಿಪ್ರಿಯಾ ಅವರು ಲಕ್ಕಿ ಮತ್ತು ಹ್ಯಾಪಿ ಎಂಬ ನಾಯಿಗಳನ್ನು ಸಾಕಿದ್ದರು. ಆದರೆ, ಲಕ್ಕಿ ಕಾರಣಾಂತರಗಳಿಂದು ಸತ್ತು ಹೋಯಿತು. ಲಕ್ಕಿ ಸತ್ತ ನಂತರ ಹ್ಯಾಪಿ ಒಂಟಿ ಆಯಿತಂತೆ. ಈ ಸಂದರ್ಭದಲ್ಲಿ ವಸಿಷ್ಠ ಸಿಂಹ ಅವರು ಕ್ರಿಸ್ಟಲ್ ಎಂಬ ನಾಯಿಮರಿಯನ್ನು ಹರಿಪ್ರಿಯಾಗೆ ನೀಡಿದರಂತೆ. ಹ್ಯಾಪಿ ಮತ್ತು ಕ್ರಿಸ್ಟಲ್ ನಡುವೆ ಸ್ನೇಹ ಬೆಳೆಯಲು ಸ್ವಲ್ಪ ಸಮಯ ಹಿಡಿಯಿತಂತೆ. ಕ್ರಿಸ್ಟಲ್ ಯಾವಾಗಲೂ ಹ್ಯಾಪಿಯ ವಸ್ತುಗಳ ಜೊತೆ ಆಟ ಆಡುತ್ತಿದ್ದರಿಂದ ಹ್ಯಾಪಿಗೂ ಸಿಟ್ಟು ಬರುತ್ತಿತ್ತಂತೆ. ಯಾರನ್ನು ಬೇಕಾದರೂ ಫ್ರೆಂಡ್ ಮಾಡಿಕೊಳ್ಳುವ ಗುಣ ಇರುವ ಕ್ರಿಸ್ಟಲ್, ಕ್ರಮೇಣ ಹ್ಯಾಪಿ ಜೊತೆಗೂ ಫ್ರೆಂಡ್ಶಿಪ್ ಬೆಳೆಸಿಕೊಂಡನಂತೆ. ಈಗ ಅವರಿಬ್ಬರೂ ಜತೆಯಲ್ಲೇ ಇರುತ್ತಾರೆ ಎಂದು ಹರಿಪ್ರಿಯಾ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಒಂದು ಸೀಕ್ರೆಟ್ ಹೇಳುತ್ತೀನಿ ಎಂದಿರುವ ಅವರು, 'ಸಿಂಹ ಈ ನಾಯಿಯನ್ನು ಗಿಫ್ಟ್ ಮಾಡಿದಾಗ ಅವನು ಒಂದು ಮೆಸೇಜ್ ತಂದಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ಹಾರ್ಟ್ ಶೇಪ್ನ ಒಂದು ಬರ್ಥ್ ಮಾರ್ಕ್ ಇದೆ. ಅವನು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಬೆಳೆಯಿತು. ಕ್ರಿಸ್ಟಲ್ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆ’ ಎಂದು ಹರಿಪ್ರಿಯಾ ಹೇಳಿಕೊಂಡಿದ್ದಾರೆ.
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ತೆಲುಗಿನ ‘ಎವರು’ ಚಿತ್ರದ ಕನ್ನಡ ರೀಮೇಕ್ನಲ್ಲಿ ನಟಿಸಿದ್ದು, ಈ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.