

ಮುಂಬೈ: 'ವೀರ್ ದೌದಲೆ ಸಾಥ್' ಎಂಬ ಹೊಸ ಮರಾಠಿ ಚಿತ್ರದಲ್ಲಿ ಅಕ್ಷಯ್ ಕುಮಾರ್, ಛತ್ರಪತಿ ಶಿವಜಿ ಮಹರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಸುದ್ದಿಯೇನಲ್ಲ. ಈಗ ಆ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಂಬೈನಲ್ಲಿ ಪ್ರಾರಂಭವಾಗಿದ್ದು, ಅಕ್ಷಯ್ ಕುಮಾರ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಆ ನಂತರ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ, ಅದರಲ್ಲೂ ಅಕ್ಷಯ್ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಯಿತು. ಶಿವಾಜಿ ಮಹಾರಾಜರ ಪಾತ್ರದಲ್ಲಿ ಅಕ್ಷಯ್ ಕುಮಾರ್ ಹೇಗೆ ಕಾಣಿಸಬಹುದು ಎಂಬ ಚರ್ಚೆ ಇಂಟರ್ನೆಟ್ನಲ್ಲಿ ಶುರುವಾಗಿತ್ತು. ಈಗ ಆ ಎಲ್ಲ ಕುತೂಹಲಗಳಿಗೆ ತೆರೆ ಬಿದ್ದಿದೆ. ಮಂಗಳವಾರ ಅಕ್ಷಯ್ ಕುಮಾರ್ ಖುದ್ದು ತಮ್ಮ ಇನ್ಸ್ಟಾಗ್ರಾಂನಲ್ಲಿ ಚಿತ್ರದ ಮೊದಲ ಲುಕ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅವರು, 'ಇಂದು ಮರಾಠಿ ಚಿತ್ರ 'ವೀರ್ ದೌದಲೆ ಸಾಥ್'ನ ಚಿತ್ರೀಕರಣ ಪ್ರಾರಂಭವಾಗಿದೆ. ಶಿವಾಜಿ ಮಹಾರಾಜರ ಪಾತ್ರವನ್ನು ಮಾಡುವುದಕ್ಕೆ ನಾನು ಪುಣ್ಯ ಮಾಡಿದ್ದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ' ಎಂದು ಹೇಳಿದ್ದಾರೆ.
'ವೀರ್ ದೌದಲೆ ಸಾಥ್' ಚಿತ್ರವು ಬರೀ ಮರಾಠಿಗಷ್ಟೇ ಸೀಮಿತವಾಗಿರುವುದಿಲ್ಲ. ಹಿಂದಿ, ತಮಿಳು ಮತ್ತು ತೆಲುಗಿಗೂ ಡಬ್ ಆಗಿ ಬಿಡುಗಡೆ ಆಗಲಿದೆ. ವಸೀಮ್ ಖುರೇಷಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, 2023ರ ದೀಪಾವಳಿಗೆ ಚಿತ್ರ ಬಿಡುಗಡೆಯಾಗಲಿದೆ.
ಇದಲ್ಲದೆ ಅಕ್ಷಯ್ ಕುಮಾರ್ 'ಸೆಲ್ಫಿ', 'ಓ ಮೈ ಗಾಡ್ 2', 'ಕ್ಯಾಪ್ಸೂಲ್ ಗಿಲ್', 'ಸೂರರೈ ಪೊಟ್ರು' ಚಿತ್ರದ ರೀಮೇಕ್ ... ಮುಂತಾದ ಚಿತ್ರಗಳಲ್ಲಿ ಅಕ್ಷಯ್ ನಟಿಸಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಡೆಯಾಗಬೇಕಿದೆ.