ನಾಯಿಮರಿ ಉಳಿಸಲು ಹೋಗಿ ಜೀವತ್ಯಾಗ ಮಾಡಿದ 13 ರ ಪೋರ: ಅಸ್ಸಾಂ ಪ್ರವಾಹದಲ್ಲಿ ಕೊಚ್ಚಿ ಹೋದ ಬಾಲಕ; ಮನಕಲುಕುವ ಸುದ್ದಿ ನಿಮ್ಮ ಮುಂದೆ! Assam Floods

ಸಾಕು ನಾಯಿಮರಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ 13 ವರ್ಷದ ಬಾಲಕ ಹೃ
ಸಾಕು ನಾಯಿಮರಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ 13 ವರ್ಷದ ಬಾಲಕ ಹೃ
Published on

ಪ್ರಮುಖ ಮುಖ್ಯಾಂಶಗಳು

  • ಅಸ್ಸಾಂನಲ್ಲಿ ಮುಂದುವರಿದ ಭೀಕರ ಪ್ರವಾಹ
  • ಸಾಕು ನಾಯಿಮರಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ 13 ವರ್ಷದ ಬಾಲಕ ಹೃದೀಪ್
  • ಬಾಲಕನ ಪ್ರಾಣತ್ಯಗದ ಸುದ್ದಿ ಸೋಷಿಯಲ್​ ಮೀಡಿಯಾನಲ್ಲಿ ಭಾರಿ ವೈರಲ್​!
ಅಸ್ಸಾಂ: ಅಸ್ಸಾಂನಲ್ಲಿ ಮತ್ತೆ ಭೀಕರ ಪ್ರವಾಹ (AssamFloods) ಮುಂದುವರಿದಿದ್ದು, ಈಗಾಗಲೇ ನೂರಾರು ಕುಟುಂಬಗಳು ನೀರುಪಾಲಾಗಿವೆ. ದಿನ ನಿತ್ಯ ಕರುಳುಬಳ್ಳಿಯನ್ನೇ ಹರಿದು ಹಾಕುವಂತ ಸುದ್ದಿಗಳು ಬರುತ್ತಿದ್ದು, ಇಂದು ಬಂದಿರುವ ಸುದ್ದಿಯೊಂದು ಸೋಷಿಯಲ್​ ಮೀಡಿಯಾನಲ್ಲಿ ಸಾಕಷ್ಟು ಹಂಚಿಕೆಯನ್ನು ಕಾಣುತ್ತಿದೆ.

ನಾಯಿ ಉಳಿಸಲು ಹೋಗಿ ಪ್ರಾಣ ಬಿಟ್ಟ ಬಾಲಕ!

ಅಸ್ಸಾಂನ ನಜೀರಾದ ಬಾಮುನ್ ಪುಖುರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ದೀಪಕ್ ಮತ್ತು ಪರ್ಬತಿ ಪಣಿಕಾ ದಂಪತಿಯ ಏಕೈಕ ಪುತ್ರ 7ನೇ ತರಗತಿ ಓದುತ್ತಿದ್ದ ಹೃದೀಪ್ ಪಣಿಕಾ (13) ಸಾವಿನ ಸುಳಿಗೆ ಸಿಲುಕಿದ ಬಾಲಕನಾಗಿದ್ದಾನೆ.
ಪ್ರವಾಹದ ನೀರು ಅನಿರೀಕ್ಷಿತವಾಗಿ ಇಡೀ ಗ್ರಾಮವನ್ನು ಆವರಿಸಿ, ಎಲ್ಲೆಡೆ ನೀರು ತುಂಬಿಕೊಳ್ಳುತ್ತಿದ್ದಾಗ, ಹೃದೀಪ್ ಮನೆಯಲ್ಲಿದ್ದ ಮೂರು ತಿಂಗಳ ಸಾಕು ನಾಯಿಮರಿ 'ಬೋರುನ್' ಜೋರಾಗಿ ಹರಿಯುತ್ತಿದ್ದ ಪ್ರವಾಹದ ನೀರಿನಲ್ಲಿ ಸಿಲುಕಿ ಪರದಾಡುತ್ತಿರುವುದನ್ನು ನೋಡಿದ್ದಾನೆ. ನಾಯಿಮರಿ ಪ್ರಾಣಕ್ಕಾಗಿ ಒದ್ದಾಡುವುದನ್ನು ನೋಡಲಾರದೆ, ಬಾಲಕ ಯಾವುದೇ ಯೋಚನೆ ಮಾಡದೆ ಪ್ರವಾಹದ ನೀರಿಗೆ ಹಾರಿದ್ದಾನೆ.
ತನ್ನ ಜೀವದ ಹಂಗು ತೊರೆದು ನಾಯಿಮರಿಯನ್ನು ದಡಕ್ಕೆ ತಳ್ಳುವಲ್ಲಿ ಆ ಬಾಲಕ ಯಶಸ್ವಿಯಾಗಿದ್ದಾನೆ. ಆದರೆ, ಅಷ್ಟರಲ್ಲೇ ಪ್ರವಾಹದ ರಭಸ ಹೆಚ್ಚಾಗಿದ್ದು, ಆ ದೈತ್ಯ ಅಲೆಗಳ ಮುಂದೆ ಹುಡುಗನ ಶಕ್ತಿ ಸಾಕಾಗದೆ ಪ್ರಬಲವಾದ ನೀರಿನ ಹೊಳೆಗೆ ಹೃದೀಪ್ ಕೊಚ್ಚಿಹೋಗಿದ್ದಾನೆ.

ಕಣ್ಣೀರಿಡುತ್ತಿರುವ ಹೆತ್ತವರು!

ತಕ್ಷಣವೇ ಸ್ಥಳೀಯರು ಹುಡುಕಾಟ ನಡೆಸಿದಾಗ, ಕೆಲ ಸಮಯದ ನಂತರ ಹೃದೀಪ್ ಶವವಾಗಿ ಪತ್ತೆಯಾಗಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ಆ ತಾಯಿ-ತಂದೆಯ ಆಘಾತಕ್ಕೆ ಮಿತಿಯೇ ಇಲ್ಲದಂತಾಗಿದೆ. ಈಗಾಗಲೇ ಪ್ರವಾಹಕ್ಕೆ ಸಿಲುಕಿ ತಮ್ಮ ಸ್ವಂತ ಮನೆಯನ್ನು ಕಳೆದುಕೊಂಡು ಕಂಗಾಲಾಗಿದ್ದ ಆ ಕುಟುಂಬಕ್ಕೆ, ಮಗನ ಸಾವು ಬರಸಿಡಲಿನಂತೆ ಅಪ್ಪಳಿಸಿದೆ.
ಮನೆಯ ಮುಂದೆ ಕುಳಿತು ಮಗನ ಶವವನ್ನು ನೋಡಿ ಆ ಪೋಷಕರು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕರುಳು ಚುರುಕಿಸುವಂತೆ ಮಾಡಿವೆ. ವಿಶೇಷವೆಂದರೆ, ಹೃದೀಪ್ ತನ್ನ ಜೀವವನ್ನೇ ಕೊಟ್ಟು ರಕ್ಷಿಸಿದ ಆ ಪುಟ್ಟ ನಾಯಿಮರಿ ಬೋರುನ್, ಅಳುತ್ತಾ ಕುಳಿತಿರುವ ಹೆತ್ತವರ ಬಳಿಯೇ ಸದ್ದಿಲ್ಲದೆ ಕುಳಿತುಕೊಂಡಿರುವ ದೃಶ್ಯ ನೋಡುಗರ ಎದೆ ಒಡೆಯುವಂತಿದೆ.

ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್

ಈ ಹೃದಯ ವಿದ್ರಾವಕ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯಂತೆ ಹರಡಿದ್ದು, ನೆಟ್ಟಿಗರು ಕಣ್ಣೀರಿಟ್ಟಿದ್ದು, ಬಾಲಕನ ನಿಸ್ವಾರ್ಥ ಪ್ರೀತಿಯನ್ನು ಕೊಂಡಾಡುತ್ತಿದ್ದಾರೆ.
ದೇವರು ನಿಜವಾಗಿಯೂ ಇದ್ದಾರೆ, ಈ ಹುಡುಗ ದೇವರ ರೂಪನೇ ಸರಿ ಎಂದು ಒಬ್ಬ ಬಳಕೆದಾರರು ಬರೆದರೆ, ಸಾಮಾನ್ಯ ಜನರು ಪ್ರಕೃತಿಯ ಈ ಕೋಪಕ್ಕೆ ಏಕೆ ಇಷ್ಟೊಂದು ಬೆಲೆ ತೆರಬೇಕಾಗಿದೆ? ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸ್ಸಾಂ ಪ್ರವಾಹದಲ್ಲಿ ಇದುವರೆಗೆ ಸುಮಾರು 68ಕ್ಕೂ ಹೆಚ್ಚು ಜೀವಗಳು ಬಲಿಯಾಗಿದ್ದು, ಲಕ್ಷಾಂತರ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಒಂದು ಪ್ರಾಣಿಯನ್ನು ಉಳಿಸಲು ತನ್ನ ಜೀವವನ್ನೇ ಬಿಟ್ಟುಹೋದ ಬಾಲಕ ಹೃದೀಪ್ ಪಣಿಕಾ ಕಥೆ ಮಾತ್ರ ಇಡೀ ದೇಶದ ಕಣ್ಣೀರಿಗೆ ಕಾರಣವಾಗಿದೆ, (ಏಜನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net