ಜೈಪುರ: ಇಬ್ಬರು ವಿದ್ಯಾರ್ಥಿಗಳ ನಡುವಿನ ಗಲಾಟೆ ಕೋಮು ಸಂಘರ್ಷವಾಗಿ ಮಾರ್ಪಟ್ಟು ಉದ್ವಿಘ್ನ ಪರಿಸ್ಥಿತಿ ಉಂಟಾಗಿರುವ ಘಟನೆ ರಾಜಸ್ಥಾನದ ಉದಯ್ಪುರದಲ್ಲಿ ನಡೆದಿದೆ. ಘಟನೆಯಲ್ಲಿ ಅರ್ಧ ಡಜನ್ಗೂ ಹೆಚ್ಚಿನ ಕಾರಿಗಳಿಗೆ ಬೆಂಕಿ ಹಚ್ಚಲಾಗಿದ್ದು, ನಗರದ ಹಲವೆಡೆ ಕಲ್ಲು ತೂರಾಟ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಅರವಿಂದ್ ಪೋಸ್ವಾಲ್, ಉದಯ್ಪುರದ ಮಧುಬನ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, 10ನೇ ತರಗಿ ವಿದ್ಯಾರ್ಥಿಗೆ ಸಹಪಾಠಿ ತೊಡೆಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡಿರುವ ವಿದ್ಯಾರ್ಥಿ ಹಿಂದು ಆಗಿದ್ದು, ಚಾಕುವಿನಿಂದ ಇರಿದ ವಿದ್ಯಾರ್ಥಿ ಮುಸ್ಲಿಂ ಎಂಬುದಾಗಿ ತಿಳಿದು ಬಂದಿದೆ. ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಅಹಿತ ಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಗೋಯೆಲ್ ಮಾತನಾಡಿ, ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಬಿಟ್ಟಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬಲಪಂಥೀಯ ಸಂಘಟನೆಗಳು ಶಾಲೆ ಬಳಿ ನಿಲ್ಲಿಸಲಾಗಿದ್ದ ಕಾರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಇದಲ್ಲದೆ ನಗರದ ಹಲವೆಡೆ ಕಲ್ಲುತೂರಾಟ ನಡೆದಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಗಾಯಾಳುವಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಗೋಯೆಲ್ ಮಾಹಿತಿ ನೀಡಿದ್ದಾರೆ.