ನವದೆಹಲಿ: ಗುತ್ತಿಗೆ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ಆಡುವುದು ಕಡ್ಡಾಯವೆಂದು ಬಿಸಿಸಿಐ ಸೂಚಿಸಿರುವ ನಡುವೆಯೂ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ತಮ್ಮ ತವರು ರಾಜ್ಯ ಜಾರ್ಖಂಡ್ ಪರ ಆಡದೇ ಉದ್ಧಟತನ ಮೆರೆದಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈ ಬಿಡಲಾಗಿತ್ತು.. ಇದೀಗ ಇಶಾನ್ ಕಿಶನ್ ರಾಷ್ಟ್ರೀಯ ತಂಡಕ್ಕೆ ಮರಳಲು ಸಜ್ಜಾಗಿದ್ದು, ಅದಕ್ಕೆ ಮುನ್ನುಡಿ ಎಂಬಂತೆ ದೇಶೀಯ ಕ್ರಿಕೆಟ್ನಲ್ಲಿ ಆಡಲು ಸಜ್ಜಾಗಿದ್ದಾರೆ.
2023ರಲ್ಲಿ ಏಕದಿನ ವಿಶ್ವಕಪ್ ಮುಗಿದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕಿಶನ್ ಕೊನೆಯದಾಗಿ ಆಡಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶ ಪಡೆದರಾದರೂ ವೈಯಕ್ತಿಕ ಕಾರಣಗಳನ್ನು ನೀಡಿ ತವರಿಗೆ ವಾಪಸ್ ಆಗಿದ್ದರು. ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಲು ಯತ್ನಿಸಿದರಾದರೂ ಅಂದಿನ ಕೋಚ್ ರಾಹುಲ್ ದ್ರಾವಿಡ್ ರಾಹುಲ್ ದ್ರಾವಿಡ್ ಇಶಾನ್ಗೆ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವಂತೆ ಸೂಚಿಸಿದ್ದರು. ಆದರೆ, ಕೋಚ್ ಮಾತಿಗೆ ಸೆಡ್ಡು ಹೊಡೆದಿದ್ದ ಇಶಾನ್ ದೇಶೀಯ ಟೂರ್ನಿಗಳಲ್ಲಿ ಭಾಗಿಯಾಗದೆ ಉದ್ಧಟತನ ಮೆರೆದಿದ್ದರು. ಇದಾದ ಬಳಿಕ ಇಶಾನ್ರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈ ಬಿಡಲಾಗಿತ್ತು.
ಇದೀಗ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಲು ಇಶಾನ್ ಕಿಶನ್ ಸಜ್ಜಾಗಿದ್ದು, ಸೆಪ್ಟೆಂಬರ್ನಲ್ಲಿ ಆರಂಭವಾಗಲಿರುವ ದುಲೀಪ್ ಟ್ರೋಫಿಗೂ ಮುಂಚಿತವಾಗಿ ಅವರು ಬುಚ್ಚಿ ಬಾಬು ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದಾರೆ. ದೀರ್ಘ ಸಮಯದ ನಂತರ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಂಡ ಇಶಾನ್ 86 ಬಾಲ್ಗಳಲ್ಲಿ ಶತಕ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ರಾಷ್ಟ್ರೀಯ ತಂಡಕ್ಕೆ ಅವರ ಪುನರಾಗಮನವನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ಕುರಿತು ಮಾತನಾಡಿರುವ ಜಯ್ ಷಾ ಇಶಾನ್ ರೂಲ್ಸ್ ಫಾಲೋ ಮಾಡಿದರೆ ಸಾಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿಯನ್ನು ಅಪ್ಪು ಸರ್, ದೈವ, ದೈವ ನರ್ತಕರಿಗೆ ಅರ್ಪಿಸುತ್ತೇನೆ: ರಿಷಭ್ ಶೆಟ್ಟಿ
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಜಯ್ ಷಾ, ಅವರು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ದೇಶೀಯ ಕ್ರಿಕೆಟ್ಅನ್ನು ಹೆಚ್ಚು ಆಡಬೇಕಾಗುತ್ತದೆ. ಈ ಹಿಂದೆಯೂ ಆತನಿಗೆ ಇದನ್ನೇ ಹೇಳಲಾಗಿತ್ತು ಎಂದು ಜಯ್ ಷಾ ಹೇಳಿದ್ದಾರೆ.
ಒಂದು ವೇಳೆ ದೇಶೀಯ ಕ್ರಿಕೆಟ್ನಲ್ಲಿ ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡಿದ್ದಲ್ಲಿ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ದಾರಿ ಸಲೀಸಾಗುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಷ್ಟ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗಿದೆ.