ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುತ್ತ ಮುಜುಗರಕ್ಕೆ ಸಿಲುಕಿಸುತ್ತಾ ಬಂದಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ತಕ್ಕ ಮಟ್ಟಿಗೆ ಟಕ್ಕರ್ ಕೊಡುತ್ತ ಬಂದಿರುವ ಕೈ ನಾಯಕರು ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಉದ್ಘಾಟನೆಗೆ ಸಿದ್ಧವಾಗಿದ್ದ ನೂತನ ಸಂಸದರ ಕಚೇರಿಯನ್ನು ವಾಪಸ್ ಪಡೆಯುವ ಮೂಲಕ ಶಾಕ್ ನೀಡಿದೆ.
ತುಮಕೂರು ಕ್ಷೇತ್ರದ ಸಂಸದ, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ತುಮಕೂರು ರೈಲ್ವೆ ನಿಲ್ದಾಣದ ಬಳಿ ಇರುವ ಹಳೇ ಪರಿವೀಕ್ಷಣಾ ಮಂದಿರದಲ್ಲಿ ಸೋಮಣ್ಣ ಅವರು ಕಚೇರಿ ಉಪಯೋಗಕ್ಕೆ ಪಡೆದುಕೊಂಡಿದ್ದರು. ಅದರ ಉದ್ಘಾಟನೆಯೂ ಆಗಸ್ಟ್ 18ರಂದು ನೆರವೇರಬೇಕಿತ್ತು. ಹೀಗಿರುವಾಗಲೇ ಅವರಿಗೆ ನೀಡಲಾಗಿದ್ದ ಕಚೇರಿಯನ್ನು ಹಿಂಪಡೆದಿದೆ.
ತುಮಕೂರಿನ ರೈಲ್ವೆ ನಿಲ್ದಾಣ ಬಳಿಯಿರುವ ಹಳೇ ಐಬಿಯನ್ನ ಸೋಮಣ್ಣ ಅವರ ಕಚೇರಿ ಉಪಯೋಗಕ್ಕೆ ನೀಡಲು ಅನುಮೋದನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಚೇರಿ ಎಂದು ಫರ್ನಿಚರ್ಸ್, ವುಡ್ ವರ್ಕ್ ಹಾಗೂ ಟೇಬಲ್ ಚೇರಗಳನ್ನ ಹಾಕಿಸಿದ್ದರು. ಅಲ್ಲದೇ ನಾಡಿದ್ದು ಅಂದರೆ ಭಾನುವಾರದಂದು (ಆಗಸ್ಟ್ 18) ಕಚೇರಿ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿತ್ತು. ಆದ್ರೆ, ಕಚೇರಿ ಉದ್ಘಾಟನೆಗೆ ಎರಡು ದಿನ ಬಾಕಿ ಇರುವಾಗಲೇ ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ಈ ಮೂಲಕ ಸೋಮಣ್ಣಗೆ ಬಗ್ ಶಾಕ್ ಕೊಟ್ಟಿದೆ.
ಇದನ್ನೂ ಓದಿ: ಹರಿಯಾಣ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್; ಅಕ್ಟೋಬರ್ 1ಕ್ಕೆ ಮತದಾನ, 4ಕ್ಕೆ ಎಣಿಕೆ
ನಾಲ್ಕು ಕೊಠಡಿಗಳನ್ನ ಸೋಮಣ್ಣರಿಗೆ ನೀಡಲಾಗಿತ್ತು. ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಪರಿವೀಕ್ಷಣಾ ಮಂದಿರದ ನಾಲ್ಕು ಕೊಠಡಿಗಳನ್ನ ಉನ್ನತೀಕರಣ ಮಾಡಿಸಿದ್ದರು. ಆದ್ರೆ, ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆ ಈ ಕೂಡಲೇ ಹಿಂಪಡೆಯುವಂತೆ ತುಮಕೂರು ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ್ ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ತುಮಕೂರು ನಗರ ಕ್ಷೇತ್ರದ ಶಾಸಕ ಜ್ಯೋತಿ ಗಣೇಶ್, ಇಲ್ಲಿ ಇಷ್ಟು ವರ್ಷ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಕ್ಷುಲ್ಲಕ ರಾಜಕಾರಣ ಮಾಡಬಾರದು. ಈ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಮಾತೇ ಇಲ್ಲ. ಯಾರು ಏನು ಮಾಡುತ್ತಾರೋ ನೋಡೋಣ. ಈ ಭಾನುವಾರ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯ ಎಲ್ಲಾ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು. ಈಗ ಏಕಾಏಕಿ ರದ್ದು ಮಾಡಿ ಆದೇಶ ಮಾಡಿದ್ದಾರೆ. ಈ ರೀತಿಯ ನಡೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.