ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​ಗೆ ಬೆದರಿಕೆ: ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಕರೆ

ajith
Published on

ಚೆನ್ನೈ: ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​ ಸೇರಿದಂತೆ ಅವರ ಕುಟುಂಬಕ್ಕೆ ಅನಾಮಿಕ ವ್ಯಕ್ತಿಯೊಬ್ಬ ಬಾಂಬ್​ ಬೆದರಿಕೆ ಒಡ್ಡಿರುವುದಾಗಿ ಶನಿವಾರ ಸಂಜೆ ವರದಿಯಾಗಿದೆ.

ಪೊಲೀಸ್​ ಮೂಲಗಳ ಪ್ರಕಾರ ಜುಲೈ 18ರಂದು ಚೆನ್ನೈ ಪೊಲೀಸ್​ ಕಂಟ್ರೋಲ್​ ರೂಮ್​ಗೆ ಕರೆ ಮಾಡಿದ ಅನಾಮಿಕ, ಇಂಜಂಬಕ್ಕಮ್​ನಲ್ಲಿರುವ ಅಜಿತ್​ ಮನೆಯಲ್ಲಿ ಬಾಂಬ್​ ಇರುವುದಾಗಿ ಹೇಳಿ ತಕ್ಷಣ ಫೋನ್​ ಸಂಪರ್ಕ ಕಡಿತಗೊಳಿಸಿದ್ದಾನೆ.

ಬೆದರಿಕೆ ಕರೆ ಪ್ರಕಾರ ಬಾಂಬ್​ ನಿಷ್ಕ್ರಿಯ ದಳದೊಂದಿಗೆ ಅಜಿತ್​ ಮನೆಗೆ ಭೇಟಿ ನೀಡಿದ ಪೊಲೀಸ್​ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಶೋಧ ಕಾರ್ಯ ನಡೆದಿದ್ದು, ಇದೊಂದು ಹುಸಿ ಬಾಂಬ್​ ಕರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂದಹಾಗೆ ಅನಾಮಿಕ ಕರೆಯು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಿಂದ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಯಾರೆಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ. ಒಂದೇ ತಿಂಗಳಲ್ಲಿ ಅಜಿತ್​ ಸೇರಿದಂತೆ ವಿಜಯ್​ ಮತ್ತು ರಜಿನಿಕಾಂತ್​ ಮನೆಗೆ ಬಾಂಬ್​ ಬೆದರಿಕೆ ಕರೆಗಳು ಬಂದಿವೆ. ಎಲ್ಲವೂ ಸಹ ಹುಸಿ ಬಾಂಬ್ ಬೆದರಿಕೆಯಾಗಿದೆ.

ಈ ಹಿಂದೆ ವಿಜಯ್​ ಮನೆಗೂ ವಿಲ್ಲುಪುರಂ ಜಿಲ್ಲೆಯಿಂದ ಬೆದರಿಕೆ ಕರೆ ಬಂದಿತ್ತು. ಭುವನೇಶ್​ ಎಂಬ ಹೆಸರಿನಲ್ಲಿ ಕರೆ ಬಂದಿತ್ತು. ಇದರ ಬೆನಲ್ಲೇ ಆತನ ಮನೆಗೆ ಪೊಲೀಸರು ಭೇಟಿ ನೀಡಿದಾಗ ಆತನೊಬ್ಬ ಮಾನಸಿಕ ಅಸ್ವಸ್ಥ ಎಂದು ಕುಟುಂಬ ಕ್ಷಮೆಯಾಚಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net