

ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕರೆಲ್ಲರೂ ಮನೆಯಲ್ಲಿಯೇ ಇರುವುದರಿಂದ ಒಂದಷ್ಟು ಪ್ರತಿಭೆಗಳಿಗೆ ಇದು ತೊಡಕಾಗಿ ಪರಿಣಮಿಸಿದೆ. ಅಂಥ ಪ್ರತಿಭೆಗಳಿಗೆ ಸಾಣೆ ಹಿಡಿಯುವ ಕೆಲಸವನ್ನು ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಾಡಲು ಮುಂದೆ ಬಂದಿದ್ದಾರೆ. ಅದಕ್ಕೆ ಬೇಕಾಗಿರುವುದು ಮೊಬೈಲ್ ಫೋನ್ ಮತ್ತು ಒಂದಷ್ಟು ಸೃಜನಶೀಲತೆ.
ಹೌದು, ಎಫ್ಟಿಸಿ ಶಾರ್ಟ್ಸ್ ಚಾಲೆಂಜ್ ಆರಂಭಿಸಿರುವ ಸುನೀಲ್ ಶೆಟ್ಟಿ, ಕಿರುಚಿತ್ರ ಸಿದ್ಧಪಡಿಸಿ ಕಳುಹಿಸುವಂತೆ ಕೋರಿದ್ದಾರೆ. ಹಾಗಂತ ಮನೆಯಿಂದ ಹೊರಬಂದು ಎಲ್ಲೆಂದರಲ್ಲಿ ಚಿತ್ರೀಕರಿಸಿ ಕಳುಹಿಸುವುದಲ್ಲ. ಕಡ್ಡಾಯವಾಗಿ ಮನೆಯಲ್ಲಿಯೇ ಒಳ್ಳೆಯ ಕಾನ್ಸೆಪ್ಟ್ ಆಯ್ದುಕೊಂಡು ಕಿರುಚಿತ್ರವನ್ನು ರೆಡಿ ಮಾಡಿ ಕಳುಹಿಸಬೇಕು. ಅದಕ್ಕೂ ಮೊದಲು www.FTCTalent.com ನಲ್ಲಿ ಲಾಗ್ ಇನ್ ಆಗಿ ರಿಜಿಸ್ಟರ್ ಮಾಡಿಸಬೇಕು. ರಿಜಿಸ್ಟರ್ ಆಗುತ್ತಿದ್ದಂತೆ ಕಿರುಚಿತ್ರ ಹೇಗಿರಬೇಕು? ಅದರ ಮಾನದಂಡಗಳೇನು ಎಂಬ ಮಾಹಿತಿಯೂ ಲಭ್ಯವಾಗಲಿದೆ.
ಈ ಕಿರುಚಿತ್ರವನ್ನು ಫೋನ್ನಲ್ಲೇ ಸೆರೆಹಿಡಿಯಬೇಕು. ಅಷ್ಟೇ ಅಲ್ಲ ನಿಮಗೆ ಲಭ್ಯ ಇರುವ ಸಂಪನ್ಮೂಲ ಬಳಸಿಕೊಂಡು ಎಡಿಟಿಂಗ್ ಮತ್ತು ಸೌಂಡಿಂಗ್ ಮಾಡಿಕೊಳ್ಳಬೇಕು. ಕಿರುಚಿತ್ರದಲ್ಲಿ ನೀವು ನಟಿಸಬಹುದು, ಮನೆಯವರನ್ನೂ ಸೇರಿಸಿಕೊಳ್ಳಬಹುದು. ಸಾಕು ಪ್ರಾಣಿಗಳ ಬಳಕೆಗೂ ಇಲ್ಲಿ ಅವಕಾಶ ಇದೆ. ಹೀಗೆ ಆಯ್ದ ಟಾಪ್ ಮೂರು ಕಿರುಚಿತ್ರಗಳಿಗೆ ದೊಡ್ಡ ಮೊತ್ತವನ್ನು ಬಹುಮಾನದ ರೂಪದಲ್ಲಿ ನೀಡಲಾಗುತ್ತದೆ. ಅಷ್ಟೇ ಅಲ್ಲ ಬೆಸ್ಟ್ ಡೈರೆಕ್ಟರ್, ಬೆಸ್ಟ್ ಆ್ಯಕ್ಟರ್, ಬೆಸ್ಟ್ ಸೌಂಡ್, ಬೆಸ್ಟ್ ಎಡಿಟಿಂಗ್ಗೂ ಬಹುಮಾನವಿದೆ. ಆಯ್ದ ಮೂರು ಕಿರುಚಿತ್ರಗಳು ಟಿವಿ ಅಥವಾ ಓಟಿಟಿ ಫ್ಲಾಟ್ಫಾರ್ಮ್ ನಲ್ಲಿ ಬಿತ್ತರವಾಗಲಿವೆ. (ಏಜೆನ್ಸೀಸ್)