

ಮುಂಬೈ: ಬಾಲಿವುಡ್ ನಟಿ ಕಂಗನಾ ಹಲವು ಹೇಳಿಕೆ ಮೂಲಕ ವಿವಾದದ ತುತ್ತ ತುದಿಯಲ್ಲಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡುತ್ತ ಕಾಂಟ್ರವರ್ಸಿ ಸೃಷ್ಟಿಸುತ್ತಿದ್ದಾರೆ. ಬಾಲಿವುಡ್ ಚಿತ್ರರಂಗದ ವಿರುದ್ಧವೂ ಹರಿಹಾಯ್ದಿದ್ದಾರೆ. ಇದೀಗ ಇದೇ ನಟಿ ಸೌತ್ ಚಿತ್ರರಂಗವನ್ನು ಕೊಂಡಾಡಿದ್ದಾರೆ.
ಹೌದು, ಇತ್ತೀಚೆಗಷ್ಟೇ ಉತ್ತರಪ್ರದೇಶದಲ್ಲಿ ದೇಶವೇ ತಿರುಗಿ ನೋಡುವಂತೆ ಫಿಲಂ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದರು. ಅವರ ಹೇಳಿಕೆಯನ್ನು ರೀ ಟ್ವಿಟ್ ಮಾಡಿಕೊಂಡ ಕಂಗನಾ, ‘ಜನಗಳ ದೃಷ್ಟಿಯಲ್ಲಿ ಟಾಪ್ ಇಂಡಸ್ಟ್ರಿ ಅಂದರೆ ಅದು ಬಾಲಿವುಡ್ ಅಂತ. ಆದರೆ, ಅಸಲಿಗೆ ಅದೆಲ್ಲ ಸುಳ್ಳು. ನಿಜ ಹೇಳಬೇಕೆಂದರೆ, ಟಾಲಿವುಡ್ ಚಿತ್ರೋದ್ಯಮವೇ ಭಾರತದಲ್ಲಿ ನಂ.1 ಸ್ಥಾನದಲ್ಲಿದೆ’ ಎಂದಿದ್ದಾರೆ.
ಅಷ್ಟೇ ಅಲ್ಲ ತಮ್ಮ ಹೇಳಿಕೆಗೆ ಸೂಕ್ತ ವಿವರಣೆಯನ್ನೂ ನೀಡಿದ್ದಾರೆ ಕಂಗನಾ. ‘ಸದ್ಯದ ಮಟ್ಟಿಗೆ ನೋಡಿದರೆ, ಪ್ಯಾನ್ ಇಂಡಿಯಾ ಪರಿಕಲ್ಪನೆಯ ಸಿನಿಮಾಗಳು ಟಾಲಿವುಡ್ನಲ್ಲಿ ಹೆಚ್ಚೆಚ್ಚು ಸೃಷ್ಟಿಯಾಗುತ್ತಿವೆ. ಅದರಲ್ಲೂ ಹೈದರಾಬಾದ್ನಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ಭಾರತದ ಬಹುತೇಕ ಸಿನಿಮಾಗಳು ಶೂಟ್ ಆಗುತ್ತವೆ. ಹಾಗಾಗಿ ನನ್ನ ಪ್ರಕಾರ ಭಾರತದ ನಂ. 1 ಸಿನಿಮಾ ಇಂಡಸ್ಟ್ರಿ ಅಂದರೆ ಅದು ಟಾಲಿವುಡ್ ಮಾತ್ರ’ ಎಂದಿದ್ದಾರೆ.
ಇದೇ ವೇಳೆ ಸದ್ಯದ ಭಾರತ ಸಿನಿಮಾರಂಗದ ಸ್ಥಿತಿ ಹೇಗಿದೆ ಎಂಬುದರ ಬಗ್ಗೆಯೂ ಮಾತನಾಡಿರುವ ಕಂಗನಾ, ಅತ್ಯುತ್ತಮವಾಗಿ ಡಬ್ ಆದ ಭಾರತೀಯ ಸಿನಿಮಾಗಳಿಗೆ ಸಿಗದ ಮನ್ನಣೆ, ಡಬ್ ಆದ ಹಾಲಿವುಡ್ ಚಿತ್ರಗಳಿಗೆ ಸಿಗುತ್ತಿದೆ. ಹಾಗಾಗಿ ಆ ಹಾವಳಿಯನ್ನು ತಪ್ಪಿಸಲು ಮೊದಲು ಮುಂದಾಗಬೇಕು ಎಂದು ಆದಿತ್ಯನಾಥ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ ತೆಲುಗಿನಲ್ಲಿ ಪ್ರಭಾಸ್ ಜತೆಗೆ ಏಕ್ ನಿರಂಜನ್ ಮತ್ತು ತಮಿಳಿನಲ್ಲಿ ಧಾಮ್ ಧೂಮ್ ಸಿನಿಮಾದಲ್ಲಿ ಕಂಗನಾ ನಟಿಸಿದ್ದರು.
(ಏಜೆನ್ಸೀಸ್)