Black Box: ಜೂ.12ರ ಮಧ್ಯಾಹ್ನ 1:45ಕ್ಕೆ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ AI-171 ಏರ್ ಇಂಡಿಯಾ ವಿಮಾನವು ಟೇಕಾಫ್ ಆದ 32 ಸೆಕೆಂಡ್ಗಳಲ್ಲಿ ಭೀಕರ ಅಪಘಾತಕ್ಕೀಡಾಯಿತು. ಮೇಘ್ನಿನಗರ್‌ನ ಘೇಡಾಸರ್ ಕ್ಯಾಂಪ್ ಪ್ರದೇಶದ ವಸತಿ ಪ್ರದೇಶದಲ್ಲಿದ್ದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿಯಾಗಿ, ಪ್ರಯಾಣಿಕರು ಸೇರಿದಂತೆ ಕನಿಷ್ಠ 274 ಮಂದಿಯ ಪ್ರಾಣ ಕಸಿದುಕೊಂಡಿತು.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ: ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆ | Ahmedabad Plane Crash
ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ಸ್ಫೋಟಗೊಂಡ ವಿಮಾನ, ಪ್ರಯಾಣಿಕರೊಡನೆ ಸುಟ್ಟು ಭಸ್ಮವಾಯಿತು. ಅಪಘಾತ ಸಂಭವಿಸಿದ ಬೆನ್ನಲ್ಲೇ ಚುರುಕುಗೊಂಡಿರುವ ತನಿಖೆಗೆ ವಿಮಾನದಲ್ಲಿದ್ದ ಬ್ಲ್ಯಾಕ್ ಬಾಕ್ಸ್ ಇದೀಗ ಲಭ್ಯವಾಗಿದೆ. ಬಾಕ್ಸ್ ಜೊತೆಗೆ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಡಿ) ಕೂಡ ಸಿಕ್ಕಿದೆ. ಈ ವಸ್ತುಗಳು ವಿಮಾನ ಅಪಘಾತಕ್ಕೆ ತುತ್ತಾಗಲು ಕಾರಣವೇನು ಎಂಬುದನ್ನು ತಿಳಿಯಲು ಬಹಳ ನಿರ್ಣಾಯಕವಾಗಲಿವೆ. ಈಗಾಗಲೇ ಇವೆರಡನ್ನೂ ತನಿಖಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿಮಾನ ಸುಟ್ಟು ಬೂದಿಯಾದ್ರೂ ಬ್ಲ್ಯಾಕ್ ಬಾಕ್ಸ್ ಸುರಕ್ಷಿತ
ಕಟ್ಟಡಕ್ಕೆ ಡಿಕ್ಕಿಯಾದ ಕ್ಷಣದಲ್ಲೇ ಸ್ಫೋಟಗೊಂಡ ಏರ್ ಇಂಡಿಯಾ ವಿಮಾನ ಸಂಪೂರ್ಣವಾಗಿ ಸುಟ್ಟು ಕರಕಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರು ಜೀವ ಕಳೆದುಕೊಂಡರೆ, ದಾಖಲೆಗಳಿಗೆ ಸಂಬಂಧಿಸಿದ ಬಹುತೇಕ ವಸ್ತುಗಳು ಸುಟ್ಟು ಹೋಗಿವೆ. ಆದರೆ, ಬ್ಲ್ಯಾಕ್ ಬಾಕ್ಸ್ ಮಾತ್ರ ಅಳವಡಿಸಿದ್ದಾಗ ಹೇಗಿತ್ತೋ ಹಾಗೆಯೇ ದುರಂತದ ಬಳಿಕವೂ ಪತ್ತೆಯಾಗಿದೆ. ಆ ಮಟ್ಟಿಗೆ ಇದನ್ನು ತಯಾರಿಸಲಾಗಿದೆ. ವಿಮಾನದಲ್ಲಿದ್ದ ಟನ್ಗಟ್ಟಲೇ ಪೆಟ್ರೋಲ್ ಸ್ಫೋಟಗೊಂಡ ತಕ್ಷಣ ಸಾವಿರ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಹೊತ್ತಿ ಉರಿದಿದೆ. ಇಷ್ಟಾದರೂ ಬ್ಲ್ಯಾಕ್ ಬಾಕ್ಸ್ ಮಾತ್ರ ಕಿಂಚಿತ್ತು ಹಾಳಾಗಿಲ್ಲ.
ಇದನ್ನೂ ಓದಿ: ಜೂ.14ರಂದು ರಾಜ್ಯಮಟ್ಟದ ವಿಚಾರ ಸಂಕಿರಣ: ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್ ಮಾಹಿತಿ
1100 ಗರಿಷ್ಠ ತಾಪಮಾನದಲ್ಲಿಯೂ ಸುರಕ್ಷಿತ
1100 ಗರಿಷ್ಠ ತಾಪಮಾನದಲ್ಲೂ ಬ್ಲ್ಯಾಕ್ ಬಾಕ್ಸ್ ಸುರಕ್ಷಿತವಾಗಿರಲಿದೆ. ಆ ಮಟ್ಟಿಗಿನ ಬೆಂಕಿಯನ್ನು ಇದು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಬಾಕ್ಸ್ನಲ್ಲಿರುವ ಡೇಟಾವನ್ನು ಅಳಿಸಲಾಗುವುದಿಲ್ಲ ಎಂದು ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಬ್ಲ್ಯಾಕ್ ಬಾಕ್ಸ್ ಎರಡು ಭಾಗಗಳನ್ನು ಒಳಗೊಂಡಿದೆ. ಒಂದು ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಇನ್ನೊಂದು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR). ಎಫ್ಡಿಆರ್ ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ಅಂದರೆ, ಇದು ವಿಮಾನದ ಎತ್ತರ, ವೇಗ ಮತ್ತು ಇಂಜಿನ್ ಕಾರ್ಯಕ್ಷಮತೆಯನ್ನು ದಾಖಲಿಸುತ್ತದೆ.
ಯಾವುದರಿಂದ ಮಾಡಲ್ಪಟ್ಟಿದೆ?
ಕಾಕ್‌ಪಿಟ್‌ನಲ್ಲಿನ ಧ್ವನಿ, ಶಬ್ದಗಳು ಮತ್ತು ಸಂಭಾಷಣೆಗಳನ್ನು ಸಿವಿಆರ್ ದಾಖಲಿಸಿಕೊಳ್ಳುತ್ತದೆ. ಬ್ಲ್ಯಾಕ್ ಬಾಕ್ಸ್ ಟೈಟಾನಿಯಂ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಮಿಶ್ರಿತವನ್ನು ಒಳಗೊಂಡಿದೆ. ಇದು 1,100 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು ಅದಕ್ಕಿಂತ ಹೆಚ್ಚಿನ ಒತ್ತಡವನ್ನು ತಡೆದುಕೊಳ್ಳಬಲ್ಲದು. ಇದು ವಾಟರ್ ಪ್ರೂಫ್ ಕೂಡ ಹೌದು. ಇದು 6,000 ಮೀಟರ್ ಆಳದಲ್ಲಿಯೂ ಸಹ 30 ದಿನಗಳವರೆಗೆ ನೀರಿನಲ್ಲಿ ಸುರಕ್ಷಿತವಾಗಿ ಉಳಿಯಬಹುದು ಎಂಬ ಸಂಗತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ಇದನ್ನೂ ಓದಿ: ಜೂ.15ರಂದು ಕರಡಿಕೊಪ್ಪಲಿನಲ್ಲಿ ನೀರಿನ ಘಟಕ ಲೋಕಾರ್ಪಣೆ: ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಶಶಿಧರ್ ಹೇಳಿಕೆ
ಅಕಸ್ಮಾತ್ ವಿಮಾನ ನೀರಿನಲ್ಲಿ ಅಪಘಾತ ಕಂಡರೆ, ಬಾಕ್ಸ್ನ ಕುರುಹು ನೀರಿನಲ್ಲಿ ಸುಲಭವಾಗಿ ಕಂಡುಬರುತ್ತದೆ. ಕಾರಣ, ಇದರಲ್ಲಿರುವ ಸಿಗ್ನಲ್‌ಗಳು ಹೊರಸೂಸಲ್ಪಡುತ್ತವೆ. ಹೀಗಾಗಿ ಇದರ ಪತ್ತೆ ಇನ್ನಷ್ಟು ಸುಲಭ. ಅದೇ ಡಿವಿಆರ್ ಬ್ಲ್ಯಾಕ್ ಬಾಕ್ಸ್ಗಿಂತ ಭಿನ್ನವಾಗಿದೆ. ಇದು ವಿಮಾನದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಒಳಗೊಂಡಿದೆ. ಈ ಕ್ಯಾಮೆರಾಗಳನ್ನು ವಿಮಾನದ ಕಾಕ್‌ಪಿಟ್ ಮತ್ತು ಕ್ಯಾಬಿನ್‌ನಲ್ಲಿ ಅಳವಡಿಸಲಾಗಿರುತ್ತದೆ. ವಿಧಿವಿಜ್ಞಾನ ತಜ್ಞರು ವಿಶೇಷ ಪ್ರಯೋಗಾಲಯಗಳಲ್ಲಿ ಬ್ಲ್ಯಾಕ್ ಬಾಕ್ಸ್ ಮತ್ತು ಡಿವಿಆರ್ ಡೇಟಾವನ್ನು ತನಿಖೆಗೆ ಹಸ್ತಾಂತರಿಸುತ್ತಾರೆ,(ಏಜೆನ್ಸೀಸ್).