

Ahmedabad Plane Crash: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತಗಳಲ್ಲಿ ಒಂದಾದ ಅಹಮದಾಬಾದ್ ಏರ್ ಇಂಡಿಯಾ ಅಪಘಾತ ಸದ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಹಾರಿದ 32 ಸೆಕೆಂಡ್ಗಳಲ್ಲೇ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿಯಾಗಿ ಸ್ಫೋಟಗೊಂಡಿತು. ಓರ್ವ ಪವಾಡದಂತೆ ಬದುಕುಳಿದಿದ್ದು, ಇದೀಗ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿದೆ.
241 ಪ್ರಯಾಣಿಕರು ಸೇರಿದಂತೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಲ್ಲಿನ ಸಿಬ್ಬಂದಿಗಳು ವಿಮಾನ ದುರಂತಕ್ಕೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಏರ್ ಇಂಡಿಯಾ ವಿಮಾನ ದುರಂತದಲ್ಲಿ ಅಮಾಯಕ ಜೀವಗಳ ಜೊತೆ ನೂರಾರು ಚಿಗುರಿದ್ದ ಕನಸುಗಳು ಸುಟ್ಟು ಭಸ್ಮವಾಗಿರುವುದು ಜನರ ಕಣ್ಣಂಚಲ್ಲಿ ನೀರು ತರಿಸಿದೆ. ಅಪಘಾತದಲ್ಲಿ ಕನಿಷ್ಠ 274 ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ವಿಮಾನದಲ್ಲಿದ್ದ ಬ್ಲ್ಯಾಕ್ ಬಾಕ್ಸ್ ಇದೀಗ ಪತ್ತೆಯಾಗಿದ್ದು, ದುರಂತ ಸಂಭವಿಸುವ ಮುನ್ನ ಏನೇನು ನಡೆಯಿತು? ಕಾಕ್ಪಿಟ್ನಲ್ಲಿ ಮತ್ತು ಪೈಲೆಟ್ ಆಡಿದ ಕೊನೆ ಮಾತುಗಳೇನು ಎಂಬುದರ ಸಂಭಾಷಣೆಯನ್ನು ಈ ಬ್ಲ್ಯಾಕ್ ಬಾಕ್ಸ್ ಬಿಚ್ಚಿಡಲಿದೆ. ಈ ಮೂಲಕ ಏರ್ ಇಂಡಿಯಾ ವಿಮಾನ ಅಪಘಾತದ ಹಿಂದಿರುವ ಇಂಚಿಂಚೂ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಲಿದೆ. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ,(ಏಜೆನ್ಸೀಸ್).