ಯಾರು ದೇವರು? ಎಲ್ಲಿದ್ದಾನೆ ಗೊತ್ತಾ? ದೇವರೇ ಮೈಮೇಲೆ ಬಂದಂತೆ ಆಡಿದ ಮಹಿಳೆಗೆ ವೃದ್ಧನ ಪಾಠ | Oldman Wisdom

ವಿಜಯವಾಣಿ (14)
Published on

Oldman Wisdom: ಇಂದಿನ ಡಿಜಿಟಲ್ ಯುಗ ಶರವೇಗದಲ್ಲಿ ಸಾಗುತ್ತಿದ್ದು, ಎಲ್ಲವೂ ಆನ್​ಲೈನ್​ ಮಯವಾಗಿದೆ. ಆರು ಇಂಚಿನ ಸ್ಮಾರ್ಟ್​ಫೋನ್ ಕಾಲಘಟ್ಟಕ್ಕೆ ಜನರು ಒಗ್ಗಿಕೊಂಡಿದ್ದಾರೆ. ಇಂಥಾ ಕಾಲದಲ್ಲಿಯೂ ಮೂಢನಂಬಿಕೆ, ಅಪನಂಬಿಕೆಗಳಿಗೆ ಮುಗ್ಧ ಜನರು ಬಲಿಯಾಗುತ್ತಿರುವ ಸಂಗತಿ ನಿಜಕ್ಕೂ ಕಳವಳ ಹಾಗೂ ಆತಂಕಕಾರಿ. ಇದಕ್ಕೆ ಇಂದಿಗೂ ಬ್ರೇಕ್ ಬಿದ್ದಿಲ್ಲ ಎಂಬ ವಿಷಯ ಖಂಡಿತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಬೇಕು.

ಇಂದಿಗೂ ಹಳ್ಳಿ-ಗ್ರಾಮಗಳಲ್ಲಿ ಇಂತಹ ಮೂಢನಂಬಿಕೆಯ ಆಚರಣೆಗಳು ಯಾವ ಅಡೆತಡೆಯಿಲ್ಲದೆ ಸಾಗುತ್ತಿದೆ. ಸುಳ್ಳು, ಅಪನಂಬಿಕೆಗಳಿಂದಲೇ ಕೂಡಿರುವ ಕೆಲವು ಆಚರಣೆಗಳನ್ನು ಹಳೆಯ ಸಂಸ್ಕೃತಿ, ಪದ್ಧತಿ ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಇದನ್ನು ನಡೆಸಿಕೊಂಡು ಬರುತ್ತಿರುವ ಕೆಲವರು, ದೇವರ ಹೆಸರಿನಲ್ಲಿ ಮುಗ್ಧ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಮೈಮೇಲೆ ದೇವರು ಬಂದಂತೆ ಆಡುವುದು, ದೇವರೇ ನನ್ನ ದೇಹವನ್ನು ಪ್ರವೇಶಿಸಿ, ಈ ಕೆಲಸ ಮಾಡಿಸುತ್ತಿದ್ದಾನೆ ಎಂದು ಹೇಳಿ, ಜನರ ದಿಕ್ಕು ತಪ್ಪಿಸುವವರಿಗೇನೂ ಕಡಿಮೆಯಿಲ್ಲ. ಅದಕ್ಕೆ ಇಲ್ಲೊಂದು ಘಟನೆ ಅದ್ಭುತ ನಿದರ್ಶನ ಎಂದರೆ ಖಂಡಿತ ತಪ್ಪಾಗಲಾರದು.

ವೈರಲ್ ವಿಡಿಯೋ ಪ್ರಕಾರ, ಕರ್ನಾಟಕದ ಒಂದು ಗ್ರಾಮದಲ್ಲಿ ದೇವಸ್ಥಾನದ ಮುಂದೆ ದೇವರು ಬಂದಂತೆ ವರ್ತಿಸಿದ ಮಹಿಳೆಯೊಬ್ಬಳ ಅಸಲಿ ಮುಖವನ್ನು ನಿಂತ ಜಾಗದಲ್ಲೇ ಹಿರಿಯರೊಬ್ಬರು ಬಯಲು ಮಾಡಿದ್ದಾರೆ. ದೇವರು ಬಂದಿದೆ ಎನ್ನುತ್ತಿದ್ದ ಆಕೆಯ ಕೈಗೆ ಕರ್ಪುರವಿಟ್ಟ ವ್ಯಕ್ತಿ, ಬೆಂಕಿ ಹಚ್ಚಿದರು. ಕೆಲವೇ ನಿಮಿಷಗಳಲ್ಲಿ ಬೆಂಕಿ ಸುಡಲಾರಂಭಿಸಿತು ಎಂದು ಮಹಿಳೆ ಕರ್ಪುರ ಕೆಳಗೆ ಬೀಸಾಡುತ್ತಾಳೆ. ಇದನ್ನು ಕಂಡ ಹಿರಿಯ ವ್ಯಕ್ತಿ, ಯಾರು ದೇವರು? ಎಲ್ಲಿದ್ದಾನೆ ದೇವರು ಗೊತ್ತಾ? ಇಲ್ಲಿರುವ ಪ್ರತಿಯೊಬ್ಬರ ಹೃದಯದಲ್ಲಿ ಭಗವಂತನಿದ್ದಾನೆ ಎನ್ನುತ್ತಾರೆ.

ಹೃದಯಗಳಲ್ಲಿ ದೇವರು ನೆಲಸಿದ್ದಾನೆಯೇ ಹೊರತು ಯಾರ ಮೈಮೇಲೂ ಬರುವುದಿಲ್ಲ ಎಂದು ಸ್ಥಳೀಯರಲ್ಲಿದ್ದ ಮೂಢನಂಬಿಕೆ ಹೋಗಲಾಡಿಸುವ ಪ್ರಯತ್ನದ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಈ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದ್ದು, ವೃದ್ಧನ ಅನುಭವದ ಮಾತಿಗೆ ನೆಟ್ಟಿಗರಿಂದ ಮೆಚ್ಚುಗೆಗಳು ಹರಿದುಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net