

Newspaper Ad: ಜೂ.12ರ ಮಧ್ಯಾಹ್ನ 1:45ಕ್ಕೆ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ AI-171 ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಭೀಕರ ಅಪಘಾತಕ್ಕೀಡಾದ ಘಟನೆ ನೆನಪಿನ ಅಂಗಳದಿಂದ ಕಣ್ಮರೆಯಾಗುವುದು ಕಷ್ಟಸಾಧ್ಯ. ಮೇಘ್ನಿನಗರ್‌ನ ಘೇಡಾಸರ್ ಕ್ಯಾಂಪ್ ಪ್ರದೇಶದ ವಸತಿ ಪ್ರದೇಶದಲ್ಲಿದ್ದ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಡಿಕ್ಕಿಯಾದ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 24 ಮಂದಿ ದಾರುಣ ಅಂತ್ಯ ಕಂಡರು.
ಈ ಪ್ರಕರಣದ ತನಿಖೆ ಈಗಾಗಲೇ ಪ್ರಾರಂಭವಾಗಿದ್ದು, 32 ಸೆಕೆಂಡ್ಗಳಲ್ಲಿ ಏರ್ ಇಂಡಿಯಾ ದುರಂತಕ್ಕೀಡಾಗಲು ಕಾರಣವೇನು ಎಂಬುದನ್ನು ಸ್ಪಷ್ಟವಾಗಿ ತಿಳಿಯಲು ವಿಮಾನದಲ್ಲಿದ್ದ ಬ್ಲ್ಯಾಕ್ ಬಾಕ್ಸ್ ಒಂದೇ ಅಸ್ತ್ರ. ಇದೀಗ ಪ್ರಕರಣವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಬ್ಲ್ಯಾಕ್ ಬಾಕ್ಸ್ನಲ್ಲಿ ಪೈಲೆಟ್ ಕೊನೆಗೆ ಹೇಳಿದ ಸಂದೇಶ ಸೇರಿದಂತೆ ದುರಂತಕ್ಕೂ ಮೊದಲು ನಡೆದ ಸಂಭಾಷಣೆಗಳ ಸಾಕ್ಷಿ ಸಿಗುತ್ತದೆ. ಇದು ವಿಮಾನ ಪತನದ ಇಂಚಿಂಚೂ ಮಾಹಿತಿಯನ್ನು ತಿಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಮಧ್ಯೆ ಅಪಘಾತದ ದೃಶ್ಯ ಹೋಲುವಂತೆ 'ಮಿಡ್ ಡೇ' ಪತ್ರಿಕೆಯಲ್ಲಿನ ಜಾಹೀರಾತೊಂದು ಇದೀಗ ಹಲವರ ಅಚ್ಚರಿಗೆ ಕಾರಣವಾಗಿದೆ.
ಏರ್ ಇಂಡಿಯಾ ವಿಮಾನ ದುರಂತ ಸಂಭವಿಸುವ ದಿನವೇ ಗುಜರಾತ್ನ 'ಮಿಡ್ ಡೇ' ಪತ್ರಿಕೆಯ ಮೊದಲ ಪುಟದಲ್ಲಿ ದೊಡ್ಡದಾಗಿ ಪ್ರಕಟವಾದ ಜಾಹೀರಾತು ದುರಂತದ ಮುನ್ಸೂಚನೆಯನ್ನು ಬಿತ್ತರಿಸಿರುವುದು ಹಲವರಲ್ಲಿ ಹೊಸ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದು ಕಾಕತಾಳಿಯವೋ ಅಥವಾ ಮುನ್ಸೂಚನೆಯೋ ಎಂಬ ಪ್ರಶ್ನೆ ಬೆಂಬಿಡದೆ ಕಾಡಲಾರಂಭಿಸಿದೆ. ಈ ಪತ್ರಿಕೆ ಪ್ರಕಟಗೊಂಡ ದಿನವೇ ದುರಂತ ಸಂಭವಿಸಿರುವುದು ಚುಕ್ಕೆಗಳನ್ನು ಹೊಂದಿಸಿದಂತೆ ತೋರಿಸಿದೆ.
ಜೂ.12ರ ಬೆಳಗ್ಗೆ, ಗುಜರಾತ್‌ನಲ್ಲೂ ಜನಪ್ರಿಯತೆ ಹೊಂದಿರುವ 'ಮಿಡ್-ಡೇ' ಪತ್ರಿಕೆಯು ತನ್ನ ಮುಖಪುಟದಲ್ಲಿ ಕಿಡ್‌ಝಾನಿಯಾ ಮುಂಬರುವ ಅಪ್ಪಂದಿರ ದಿನಾಚರಣೆಯ ವಾರಾಂತ್ಯದ ಕಾರ್ಯಕ್ರಮವನ್ನು ಪ್ರಚಾರ ಮಾಡುವ ದೊಡ್ಡ ಜಾಹೀರಾತನ್ನು ಪ್ರಕಟಿಸಿತು. 4ರಿಂದ 16 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಒಳಾಂಗಣ ಚಿಕಣಿ ನಗರವಾದ ಕಿಡ್‌ಝಾನಿಯಾ, ಮಕ್ಕಳು ಪೈಲಟ್, ವೈದ್ಯರು ಮತ್ತು ಇಂಜಿನಿಯರ್‌ಗಳಂತಹ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳುವಂತ ಆ್ಯಡ್ ಡಿಸೈನ್ ಮಾಡಿತ್ತು.
ಅಸಲಿಗೆ ಆ ಡಿಸೈನ್ನಲ್ಲಿ ಕಟ್ಟಡದಿಂದ ಏರ್ ಇಂಡಿಯಾ ವಿಮಾನದ ಮುಂಭಾಗ ಬಂದಿರುವುದು ಕಾಣಬಹುದು. ಅಸಲಿ ಅಪಘಾತದಲ್ಲಿಯೂ ಇದೇ ರೀತಿ ವಿಮಾನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ. ಪತ್ರಿಕೆಯಲ್ಲಿ ಪ್ರಕಟವಾದ ಮುಖಪುಟದ ಜಾಹೀರಾತಿನ ವಿನ್ಯಾಸ ಮತ್ತು ಅದೇ ದಿನ ಸಂಭವಿಸಿದ ವಿಮಾನ ದುರಂತ ಎರಡೂ ಒಂದೇ ವಿಷಯವನ್ನು ಹೇಳುವಂತಿದೆ. ಬಹುತೇಕರಿಗಿದು ಅಚ್ಚರಿ ಮೂಡಿಸಿದ್ದು, ಕಾಕತಾಳಿಯೇನೋ ಎಂಬ ಭಾವನೆಯನ್ನು ಬಿಟ್ಟಿದೆ,(ಏಜೆನ್ಸೀಸ್).