

ಮಂಡ್ಯ: ಇಂದಿನ ಕಾಲಘಟ್ಟದಲ್ಲಿ ಪ್ರಶಸ್ತಿಗಳ ಬಗ್ಗೆ ಮಾತನಾಡಲೇಬಾರದು. ಕಾರಣ ಅದೊಂದು ಉದ್ಯೋಗ, ಬಿಜಿನೆಸ್ ಆಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ ಹಾಗೂ ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಡಾ.ರಾಗೌ ಸಾಹಿತ್ಯ ಪ್ರಶಸ್ತಿ ಹಾಗೂ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಮ್ಮಿಂದಲೇ ಹಣ ಪಡೆದು ನಮಗೇ ಪ್ರಶಸ್ತಿ ನೀಡುವ ಇಂದಿನ ಹದಗೆಡುತ್ತಿರುವ ಪರಿಸ್ಥಿತಿಯಲ್ಲಿ ಕೆಲವು ಸಂಘ ಸಂಸ್ಥೆಗಳು ನೀಡುವ ಪ್ರಶಸ್ತಿಗೆ ಒಂದು ಮೌಲ್ಯವಿದೆ. ಮಂಡ್ಯದ ಕರ್ನಾಟಕ ಸಂಘ, ಧಾರವಾಡದ ವಿದ್ಯಾವರ್ಧಕ ಸಂಘ ನಡೆದು ಬಂದ ದಾರಿ ಹಾಗೂ ಕನ್ನಡ ಕಟ್ಟಿ ಬೆಳೆಸಿದ ಬಗೆ ಮಾದರಿಯಾದ ಕಾರಣದಿಂದ ಅವು ನೀಡುವ ಮೊತ್ತಕ್ಕಿಂತ ಪ್ರಶಸ್ತಿಗಳಿಗೆ ಹೆಚ್ಚು ಮೌಲ್ಯವಿದೆ ಎಂದರು.
ರಾಗೌ ಅವರದು ಕವಿ ಹೃದಯ. ಒಳ್ಳೆಯ ವಿಮರ್ಶಕರು ಹಾಗೂ ನಾಟಕಕಾರರು. ಕನ್ನಡ ಜಾನಪದ ಅಧ್ಯಯನಕ್ಕೆ ಒಂದು ಅದ್ಭುತವಾದ ನೆಲೆಗಟ್ಟನ್ನು ಮಾಡಿಕೊಟ್ಟವರು. ಜಾನಪದ ವಿದ್ಯಾರ್ಥಿ ರಾಗೌ, ಜೀಶಂಪ ಅವರನ್ನು ಉಲ್ಲೇಖಿಸದೆ ಅಧ್ಯಯನ ಮಾಡಲು ಸಾಧ್ಯವಿಲ್ಲ. ಇಂತಹವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ತಮಗೆ ಲಭಿಸಿಲ್ಲವಲ್ಲ. ಈ ಪ್ರಶಸ್ತಿಗೆ ಮೌಲ್ಯವಿದೆ. ಈ ನಿಟ್ಟಿನಲ್ಲಿ ಪ್ರಶಸ್ತಿ ಪಡೆದಿರುವ ಡಾ.ಪದ್ಮಾಶೇಖರ್ ಅವರ ನೇರ ಮಾತು, ಸಾಮಾನ್ಯ ವರ್ಗದಲ್ಲಿ ಜನಿಸಿ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಯಾದದ್ದು ಹೆಮ್ಮೆಯ ಸಂಗತಿ. ಅದೇ ರೀತಿ ಕುಸಿಯುತ್ತಿರುವ ಕ್ಷೇತ್ರವಾದರೂ ಶ್ರೇಷ್ಠ ಪರಂಪರೆ ಹೊಂದಿರುವ ಹಸ್ತಪ್ರತಿ ಶಾಸ್ತ್ರದಲ್ಲಿ ಪಠ್ಯ ಸಂಗ್ರಹ ಮಾಡಿ ಅಧ್ಯಯನ ಮಾಡಿರುವ ಡಾ.ಕೆ.ರವೀಂದ್ರನಾಥ್ ಅವರ ಸಾಧನೆ ಶ್ಲಾಘನೀಯ ಎಂದರು.
ದೇಶದಲ್ಲಿ ಭಾಷೆಗಳು ಶ್ರೇಣೀಕರಣಕ್ಕೆ ಒಳಗಾದಷ್ಟೂ ಬೇರೆ ಎಲ್ಲಿಯೂ ಆಗಿಲ್ಲ. ಶ್ರೇಷ್ಠತೆಯ ವ್ಯಸನದಿಂದ ಭಾಷೆ ಉಪಭಾಷೆಗಳು ಎಂಬ ಕಲ್ಪನೆ ಬೆಳೆಸಲಾಗಿದೆ. ಒಂದು ಭಾಷೆಯಿಂದ ಮತ್ತೊಂದು ಭಾಷೆ ಹುಟ್ಟಿದ್ದು ಎಂದು ಹೇಳಿಕೊಳ್ಳುವುದು ಒಪ್ಪಿಕೊಳ್ಳುವಂತಹ ಮಾತಲ್ಲ. ಶ್ರೇಷ್ಠ ಮತ್ತು ಕನಿಷ್ಠ ಎಂಬ ಪೂರ್ವ ನಿರ್ಧಾರ ಅಧಿಕಾರ ಸ್ಥಾಪಿಸುವ ಹುನ್ನಾರವಾಗಿದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ರಾಗೌ, ಕರಡಹಳ್ಳಿಯ ಕೆ.ಎಸ್.ಆನಂದ್, ಕರ್ನಾಟಕ ಸಂಘದ ಪದಾಧಿಕಾರಿಗಳಾದ ಲೋಕೇಶ್ ಚಂದಗಾಲು, ಮಂಜುಳಾ ಉದಯಶಂಕರ್, ಡಾ.ಕೆಂಪಮ್ಮ, ಸೋಮಶೇಖರ್, ಎಂ.ಕೆ.ಹರೀಶ್‌ಕುಮಾರ್, ಎಂ.ಎಸ್. ಅನಿತಾ, ಬಾಲಕೃಷ್ಣ ಹಾಜರಿದ್ದರು.
ಇದೇ ವೇಳೆ ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ರವರಿಗೆ ಡಾ.ರಾಗೌ ಸಾಹಿತ್ಯ ಪ್ರಶಸ್ತಿ ಹಾಗೂ ಡಾ.ಕೆ.ರವೀಂದ್ರನಾಥ್ ಅವರಿಗೆ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಯನ್ನು ತಲಾ 15 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕದೊಡನೆ ನೀಡಿ ಗೌರವಿಸಲಾಯಿತು.