ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿಗೆ ದ. ಆಫ್ರಿಕಾ ಸನ್ನಿಹಿತ! 27 ವರ್ಷಗಳ ಹಣೆಪಟ್ಟಿಗೆ ಬೀಳಲಿದ್ಯಾ ತೆರೆ? | WTC Final 2025

ವಿಜಯವಾಣಿ (19)
Published on

WTC Final 2025: ಪ್ರಸ್ತುತ ಲಾರ್ಡ್ಸ್‌ ಅಂಗಳದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿದ್ದು, ಎರಡೂ ಬಲಿಷ್ಠ ತಂಡಗಳು ನಾಲ್ಕನೇ ಹಾಗೂ ಅಂತಿಮ ದಿನಕ್ಕೆ ಕಾಲಿಟ್ಟಿದೆ. ಮೂರನೇ ಇನ್ನಿಂಗ್ಸ್​ನಲ್ಲಿ ಆಸೀಸ್​ ಪಡೆ ನೀಡಿರುವ ಗುರಿಯನ್ನು ಬೆನ್ನತ್ತಿರುವ ದಕ್ಷಿಣ ಆಫ್ರಿಕಾಗೆ ಕೇವಲ 69 ರನ್​ಗಳು ಮಾತ್ರ ಬೇಕಿದೆ. ಎರಡನೇ ಇನ್ನಿಂಗ್ಸ್ ಅಂತ್ಯಕ್ಕೆ ಎರಡೇ ವಿಕೆಟ್​ ಕಳೆದುಕೊಂಡು 213 ರನ್ ಬಾರಿಸಿರುವ ದ.ಆಫ್ರಿಕಾದ ಸ್ಟಾರ್​ ಬ್ಯಾಟರ್​​​ಗಳು, ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ.

ಈ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾಕ್ಕೆ ದೊಡ್ಡ ಆಘಾತ ನೀಡಲು ಎದುರುನೋಡುತ್ತಿದೆ. ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಈ ಪ್ರಶಸ್ತಿ ಪೈಪೋಟಿಯಲ್ಲಿ, ಆಸ್ಟ್ರೇಲಿಯಾ ಕೊಟ್ಟಿರುವ 282 ರನ್‌ಗಳ ಗುರಿಯನ್ನು ಬೆನ್ನಟ್ಟಿರುವ ದ. ಆಫ್ರಿಕಾ ಪಡೆ, ಪ್ರಪ್ರಥಮ ಬಾರಿಗೆ ಡಬ್ಲ್ಯೂಟಿಸಿ ಕಪ್​ ಗೆದ್ದು ಬೀಗಲು ತುದಿಗಾಲಿನಲ್ಲಿ ನಿಂತಿದೆ. ಗೆಲುವಿಗೆ ಸನ್ನಿಹಿತವಾಗಿರುವ ದಕ್ಷಿಣ ಆಫ್ರಿಕಾ, 27 ವರ್ಷಗಳಿಂದ ಯಾವುದೇ ಒಂದು ಟ್ರೋಫಿ ಗೆಲ್ಲದೆ ಚೋಕರ್ಸ್​ ಎಂಬ ಹಣೆಪಟ್ಟಿಗೆ ಗುರಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಗೆದ್ದರೆ, ಬಹು ವರ್ಷಗಳಿಂದ ಹೊತ್ತಿಕೊಂಡು ಬಂದಿರುವ ಚೋಕರ್ಸ್​ ಹಣೆಪಟ್ಟಿ ಇಂದೇ ಕಳಚಿ ಬೀಳಲಿದೆ. ಇದು ಐತಿಹಾಸಿಕ ಕ್ಷಣವಾಗಿ ಮಾರ್ಪಡಲಿದೆ ಎಂಬುದರಲ್ಲಿ ಅಶ್ಚರ್ಯವೇ ಇಲ್ಲ.

ದಕ್ಷಿಣ ಆಫ್ರಿಕಾದ ಬ್ಯಾಟರ್​ ಐಡೆನ್ ಮಾರ್ಕ್‌ಕ್ರಮ್ ಅದ್ಭುತ ಇನ್ನಿಂಗ್ಸ್ ಆಡಿದ್ದು, ಶತಕ ದಾಖಲಿಸುವ ಮೂಲಕ ತಮ್ಮ ತಂಡಕ್ಕೆ ಗೆಲುವಿನ ಭರವಸೆ ನೀಡಿದ್ದಾರೆ. 159 ಎಸೆತಗಳಲ್ಲಿ ಅಜೇಯ 102 ರನ್‌ ಬಾರಿಸಿರುವ ಐಡೆನ್​ ಇನ್ನೂ ಕ್ರೀಸ್‌ಗೆ ಅಂಟಿ ನಿಂತಿದ್ದಾರೆ. ಮತ್ತೊಂದೆಡೆ, ದ. ಆಫ್ರಿಕಾ ಕ್ಯಾಪ್ಟನ್​ ಟೆಂಬಾ ಬವುಮಾ ಕೂಡ ಕ್ರೀಸ್‌ನಲ್ಲಿ ಬೇರೂರಿರುವುದು ತಂಡದ ಅಭಿಮಾನಿಗಳಲ್ಲಿ ಗೆಲುವಿನ ಉತ್ಸಾಹವನ್ನು ಹೆಚ್ಚಿಸಿದೆ. 121 ಎಸೆತಗಳನ್ನು ಎದುರಿಸಿರುವ ಟೆಂಬಾ ಕೂಡ ಅಜೇಯ 65 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ. ನಾಲ್ಕನೇ ದಿನದಂದು ಏನಾದರೂ ಪವಾಡ ಸಂಭವಿಸದಿದ್ದರೆ, ಆಸ್ಟ್ರೇಲಿಯಾದ ಸೋಲು ಬಹುತೇಕ ಖಚಿತ.

ತಂಡಗಳ ಸ್ಕೋರ್ ವಿವರ

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 212 ಆಲ್ ಔಟ್

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್: 138 ಆಲ್ ಔಟ್

ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್: 207 ಆಲ್ ಔಟ್

ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್: 213/2 (ಪ್ರಸ್ತುತ ನಡೆಯುತ್ತಿದೆ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net