ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ 3 ವಲಯಗಳ ರಣತಂತ್ರ!

PM Modi
Published on

ನವದೆಹಲಿ: ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಬುಧವಾರ ತಡರಾತ್ರಿ ಉನ್ನತ ಮಟ್ಟದ ಸಭೆ ನಡೆಸಿ ಮುಂಬುರುವ ಲೋಕಸಭಾ ಚುನಾವಣೆಯ ಸಿದ್ಧತೆ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಸಂಪುಟದಲ್ಲಿ ಮಾಡಬೇಕಾದ ಬದಲಾವಣೆಯ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ತಿಳಿಬಂದಿದೆ.

ಸರ್ಕಾರದ ಒಳಗೆ ಮತ್ತು ಪಕ್ಷದ ಸಂಘಟನೆಯಲ್ಲಿನ ಸಂಭವನೀಯ ಬದಲಾವಣೆಯ ಬಗ್ಗೆ ಚರ್ಚೆ ನಡೆದಿದ್ದು, ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ಸಹ ಉಪಸ್ಥಿತರಿದ್ದರು.

ಮೂಲಗಳ ಪ್ರಕಾರ ಪ್ರಧಾನಿ ಮೋದಿ ಅವರು ಸಭೆಯಲ್ಲಿ ಸಚಿವರಿಗೆ ಕೆಲವೊಂದು ನಿರ್ದಿಷ್ಟ ನಿರ್ದೇಶನಗಳನ್ನು ನೀಡಿದ್ದಾರೆ. ತಮ್ಮ ತಮ್ಮ ವ್ಯಾಪ್ತಿಗೆ ಒಳಪಡುವ ಬಡವರು ಮತ್ತು ಹಿಂದುಳಿದ ವರ್ಗಗಳ ಅಗತ್ಯಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದಾರೆ. ಮುಂಬರುವ ಚುನಾವಣೆಗಳು ಪ್ರಾಥಮಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತವೆ ಎಂದು ಒತ್ತಿ ಹೇಳಿರುವ ಪ್ರಧಾನಿ ಮೋದಿ, ತಮ್ಮ ಪ್ರಯತ್ನಗಳನ್ನು ಬಡ ಮತ್ತು ಮಧ್ಯಮ ವರ್ಗದವರ ಯೋಗಕ್ಷೇಮಕ್ಕಾಗಿ ಮೀಸಲಿಡುವಂತೆ ಸಂಪುಟದ ಸಚಿವರುಗಳನ್ನು ಒತ್ತಾಯಿಸಿದರು.

ಹಿಂದುಳಿದ ವರ್ಗಗಳನ್ನು ಮೇಲಕ್ಕೆತ್ತಲು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವ ಅವಕಾಶಗಳನ್ನು ಕಂಡುಕೊಳ್ಳಲು ನಿರ್ದಿಷ್ಟವಾಗಿ ಗಮನಹರಿಸುವುದರ ಜೊತೆಗೆ ತಮ್ಮ ಸಂಸದೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರಧಾನಿ ಮೋದಿ, ತಮ್ಮ ಮಂತ್ರಿಗಳಿಗೆ ಸಲಹೆ ನೀಡಿದರು.

ಈ ಚುನಾವಣಾ ವರ್ಷದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಪ್ರಮುಖ ಮುಖಂಡರ ಜತೆ ಸೆಮಿನಾರ್​ ಮತ್ತು ಸಣ್ಣ ಪ್ರಮಾಣದ ಸಭೆಗಳನ್ನು ಆಯೋಜಿಸುವ ಮೂಲಕ ಜನರೊಂದಿಗೆ ಸಂಪರ್ಕದಲ್ಲಿರಲು ಮತ್ತು ಮಧ್ಯಮ ವರ್ಗ, ಬಡವರು, ತುಳಿತಕ್ಕೊಳಗಾದ ಮತ್ತು ಹಿಂದುಳಿದ ಸಮುದಾಯಗಳನ್ನು ಗುರುತಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸಲಹೆ ನೀಡಿದರು.

ಬಿಜೆಪಿಯ ಮೂರು ವಲಯಗಳ ತಂತ್ರ

ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೂ ಮುಂಚೆಯೇ ಪ್ರದೇಶಗಳು ಮತ್ತು ಸ್ಥಾನಗಳ ಸೂಕ್ಷ್ಮ ನಿರ್ವಹಣೆಯ ನೀಲನಕ್ಷೆಯು ಪ್ರಧಾನಿ ಮೋದಿ ಅವರ ನಿರ್ದೇಶನಗಳಲ್ಲಿ ಒಳಗೊಂಡಿದೆ. ಚುನಾವಣಾ ಶ್ರಮವನ್ನು ಸರಳಗೊಳಿಸಲು 543 ಲೋಕಸಭಾ ಕ್ಷೇತ್ರಗಳನ್ನು ಉತ್ತರ, ದಕ್ಷಿಣ ಮತ್ತು ಪೂರ್ವ ಎಂದು ಮೂರು ವಲಯಗಳಾಗಿ ವಿಂಗಡಿಸಲು ಬಿಜೆಪಿ ನಿರ್ಧರಿಸಿದೆ.

ಸರಣಿ ಸಭೆ

ಪ್ರತಿ ವಲಯದ ಪ್ರಮುಖ ನಾಯಕರ ಜತೆ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಜುಲೈ 6 ರಿಂದ 8ರವರೆಗೆ ಸಭೆಗಳನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ರಾಜ್ಯ ಉಸ್ತುವಾರಿಗಳು, ರಾಜ್ಯ ಘಟಕದ ಅಧ್ಯಕ್ಷರು, ರಾಜ್ಯ ಸಂಘಟನೆಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಮತ್ತು ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಪ್ರತಿಯೊಂದು ವಲಯವನ್ನು ಪ್ರತ್ಯೇಕ ಕಾರ್ಯತಂತ್ರದೊಂದಿಗೆ ಉಪ ಘಟಕವಾಗಿ ನಿರ್ವಹಿಸಬೇಕು ಎಂದು ಸಭೆಯಲ್ಲಿ ಕೇಂದ್ರ ಸಚಿವರಿಗೆ ತಿಳಿಸಲಾಗಿದೆ. ಇದಲ್ಲದೆ, ತಮ್ಮ ಸಚಿವಾಲಯಗಳಲ್ಲಿ ಪ್ರಗತಿಪರ ಮತ್ತು ನವೀನ ವಿಧಾನವನ್ನು ಅಳವಡಿಸಿಕೊಳ್ಳಲು, ಸೃಜನಶೀಲತೆಯನ್ನು ಬೆಳೆಸಲು ಮತ್ತು ಪ್ರಭಾವಶಾಲಿ ವಿಚಾರಗಳನ್ನು ಉತ್ಪಾದಿಸುವಂತೆ ಪ್ರಧಾನ ಮಂತ್ರಿಗಳು ಸಚಿವರುಗಳನ್ನು ಪ್ರೋತ್ಸಾಹಿಸಿದರು.

ಸಮಾಜದ ಎಲ್ಲ ವರ್ಗಗಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಡಳಿತವನ್ನು ಉತ್ತೇಜಿಸುವ ಗುರಿಯೊಂದಿಗೆ ಮುಂಬರುವ ಚುನಾವಣೆಗಳತ್ತ ದೃಷ್ಟಿ ನೆಟ್ಟಿರುವ ಬಿಜೆಪಿ ನಾಯಕರಲ್ಲಿ, ಹೊಸ ಉದ್ದೇಶ ಮತ್ತು ನಿರ್ಣಯದೊಂದಿಗೆ ಸಭೆಯು ಮುಕ್ತಾಯವಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net