ವಿದ್ಯಾರ್ಥಿನಿಯರ ಜತೆ ಕುಳಿತು ಬಿಸಿಯೂಟ ಸವಿದ ಅಂಬಾಟಿ ರಾಯುಡು ರಾಜಕೀಯದ ಬಗ್ಗೆ ಕೊಟ್ರು ಮಹತ್ವದ ಸುಳಿವು!

Ambati Rayudu
Published on

ವಿಜಯವಾಡ: ಹಲವು ವರ್ಷಗಳವರೆಗೆ ಕ್ರಿಕೆಟಿಗನಾಗಿ ಅದ್ಭುತ ಪ್ರದರ್ಶನಗಳೊಂದಿಗೆ ಕ್ರೀಡಾಭಿಮಾನಿಗಳನ್ನು ರಂಜಿಸಿದ್ದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು, ಇದೀಗ ಹೊಸ ಹಾದಿ ಹಿಡಿಯಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಸಾರ್ವಜನಿಕ ಸೇವೆಯತ್ತ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ. ​

ಗುಂಟೂರು ಜಿಲ್ಲೆಯ ಪ್ರವಾಸದಲ್ಲಿ ಬಿಜಿಯಾಗಿರುವ ರಾಯುಡು, ಅಮಿನಾಬಾದ್​ನಲ್ಲಿರುವ ಮೂಲಕರಿಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ, ಫಿರಂಗಿಪುರದಲ್ಲಿರುವ ಸಾಯಿ ಬಾಬ ದೇವಸ್ಥಾನ ಮತ್ತು ಬಾಲ ಯೇಸು ಚರ್ಚಿಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲದೆ, ಪ್ರತಿಪಾಡು ವಿಧಾನಸಭಾ ಕ್ಷೇತ್ರದ ವಟ್ಟಿಚೇರುಕುರು ಮಂಡಲದ ಮುಟ್ಲೂರು ಗ್ರಾಮಕ್ಕೆ ಭೇಟಿ ನೀಡಿ ಶಾಲಾ ವಿದ್ಯಾರ್ಥಿಗಳೊಂದಿಗೆ ಮಾತುಕತೆ ಸಹ ನಡೆಸಿದರು. ಅಲ್ಲದೆ, ವಿದ್ಯಾರ್ಥಿನಿಯರೊಂದಿಗೆ ನೆಲದ ಮೇಲೆಯೇ ಕುಳಿತು ಭೋಜನ ಸವಿದರು. ಅಲ್ಲದೆ, ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಸಲಹೆಗಳನ್ನು ನೀಡಿದರು.

ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಯುಡು, ಇನ್ನು ಕೆಲವೇ ತಿಂಗಳಲ್ಲಿ ಮುಂದಿನ ಭವಿಷ್ಯದ ಬಗ್ಗೆ ತಿಳಿಸುತ್ತೇನೆ. ನಾನು ಈ ಜಿಲ್ಲೆಯ ಪ್ರತಿ ಪಟ್ಟಣ ಹಾಗೂ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಈ ಹಿಂದೆ ಸಿಎಂರನ್ನು ಭೇಟಿ ಮಾಡಿದ್ದು ನಿಜ, ಆದರೆ ಆ ಸಭೆಯಲ್ಲಿ ರಾಜಕೀಯದ ಬಗ್ಗೆ ಚರ್ಚೆ ನಡೆದಿಲ್ಲ ಎಂದರು. ನಾನು ಜನಸೇವೆ ಮಾಡುತ್ತೇನೆ. ಆದರೆ, ಯಾವ ವೇದಿಕೆಯಿಂದ ಎಂಬುದನ್ನು ನಾನಿನ್ನೂ ನಿರ್ಧರಿಸಿಲ್ಲ. ಮುಂದಿನ ದಿನಗಳಲ್ಲಿ ನನ್ನ ಮುಂದಿನ ಯೋಜನೆಗಳ ಬಗ್ಗೆ ತಿಳಿಸುತ್ತೇನೆ ಎಂದರು.

ಅಂದಹಾಗೆ ರಾಯುಡು ಅವರು ಗುಂಟೂರು ಜಿಲ್ಲೆಯವರು. ಟೀಮ್​ ಇಂಡಿಯಾ ಮತ್ತು ಐಪಿಎಲ್​ನಲ್ಲಿ ಆಡಿದ್ದಾರೆ. ಅಲ್ಲದೆ, ಸಾಕಷ್ಟು ವಿವಾದಗಳಿಗೂ ಗುರಿಯಾಗಿದ್ದಾರೆ. ಇದೀಗ ರಾಜಕೀಯಕ್ಕೆ ಧುಮುಕಲು ಮುಂದಾಗಿದ್ದಾರೆ. ಗುಂಟೂರು ಲೋಕಸಭಾ ಕ್ಷೇತ್ರದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net