

ಬೆಂಗಳೂರು: ಬಿಗ್ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ಕೆಲ ಸಮಯ ಕಣ್ಮರೆಯಾದ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡಿತ್ತು. ದೊಡ್ಮನೆಯಲ್ಲಿ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವದಂತಿಯನ್ನು ಹಬ್ಬಿಸಲಾಗಿತ್ತು. ಆದರೆ, ಅದು ಸುಳ್ಳು ಸುದ್ದಿ ಪ್ರತಾಪ್ಗೆ ಫುಡ್ ಪಾಯಿಸನ್ ಆಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಬಿಗ್ಬಾಸ್ ಮೂಲಗಳು ಸ್ಪಷ್ಟನೆ ಸಹ ನೀಡಿದವು. ಇದೀಗ ಪ್ರತಾಪ್ ಅನಾರೋಗ್ಯ ವಿಚಾರವಾಗಿ ಕಳೆದ ವಾರವಷ್ಟೇ ಮನೆಯಿಂದ ಹೊರಬಂದ ಮೈಕಲ್ ಅಜಯ್ ಮಾತನಾಡಿದ್ದು, ಪ್ರತಾಪ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ವಿಜಯವಾಣಿ ಸಂದರ್ಶನದಲ್ಲಿ ಡ್ರೋನ್ ಪ್ರತಾಪ್ ಅನಾರೋಗ್ಯ ವಿಚಾರ ಪ್ರಸ್ತಾಪ ಮಾಡಿದ ಮೈಕಲ್, ಅಸಮಾಧಾನವನ್ನು ಹೊರಹಾಕಿದರು. ಆಸ್ಪತ್ರೆಯಿಂದ ಮನೆಗೆ ವಾಪಸ್ ಬಂದಾಗ ಪ್ರತಾಪ್ ಒಂದು ಭಾಷಣ ಮಾಡಿದ. ಆತನ ಮಾತು ಮುಗಿಯುತ್ತಿದ್ದಂತೆ ಸಂಗೀತಾ ಮುಂದೆ ಹೋಗಿ ಇನ್ನೂ ಮೂರೇ ವಾರ ಇದೆ ಈ ರೀತಿ ಚುಚ್ಚು ಚುಚ್ಚಿ ಮಾತನಾಡಬಾರದು ಎಂದರು. ಆ ಸಮಯದಲ್ಲಿ ಆ ವಿಚಾರವನ್ನು ಹೇಳಲು ಕಾರಣವೇ ಇರಲಿಲ್ಲ. ಏಕೆಂದರೆ, ನಾವ್ಯಾರು ಪ್ರತಾಪ್ಗೆ ಏನು ಹೇಳಿರಲಿಲ್ಲ. ಅವನು ಊಟ ಮಾಡದೇ ಇರಲು ಯಾರೊಬ್ಬರು ಕೂಡ ಕಾರಣರಲ್ಲ. ಆ ಸಮಯದಲ್ಲಿ ನಾವೇ ಏನೋ ಮಾಡಿದ್ದೀವಿ ಎಂಬಂತೆ ಬಿಂಬಿಸುವ ಪ್ರಯತ್ನವು ಕೂಡ ನಡೆದಿತ್ತು. ಇದು ಯಾಕೋ ನನಗೆ ಸರಿ ಅನಿಸಲಿಲ್ಲ ಎಂದು ಮೈಕಲ್ ಅಸಮಾಧಾನ ಹೊರಹಾಕಿದರು.
ಡ್ರೋನ್ ಪ್ರತಾಪ್ ಅವರನ್ನು ತಂತ್ರಿ ಎಂದು ಉಲ್ಲೇಖಿಸಿದ ಮೈಕಲ್, ಚೆನ್ನಾಗಿ ಆಡುತ್ತಿದ್ದಾನೆ. ಜನರಿಗೆ ಏನು ಇಷ್ಟ ಆಗುತ್ತದೆ ಎಂಬುದು ಆತನಿಗೆ ಚೆನ್ನಾಗಿ ಗೊತ್ತಿದೆ. ಹಳ್ಳಿ ಕಡೆ ಜನರು ಮುಗ್ಧ ಮನಸ್ಸಿನಿಂದ ನೋಡುವವರಿಗೆ ಅಯ್ಯೋ ಪಾಪ ಅನಿಸುವಂತೆ ಆಡುತ್ತಿದ್ದಾನೆ. ಇದು ಆತನಿಗೆ ಚೆನ್ನಾಗಿ ಉಪಯೋಗ ಸಹ ಆಗುತ್ತಿದೆ. ತುಂಬಾ ಸ್ಮಾರ್ಟ್ ಆಗಿ ಆಡುತ್ತಿದ್ದಾನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿನಯ್ ಬಗ್ಗೆ ಮಾತನಾಡಿದ ಮೈಕಲ್, ವಿನಯ್ ಅಂದ್ರೆ ಆಕ್ರಮಣಕಾರಿ ಎಂದು ಹೇಳಬಹುದು. ಏಕೆಂದರೆ, ಎಲ್ಲಾ ಟಾಸ್ಕ್ಗಳಲ್ಲಿಯೂ ಆಕ್ರಮಣಕಾರಿಯಾಗಿ ಆಡುತ್ತಾರೆ ಮತ್ತು ಮಾತನಾಡುವುದು ಕೂಡ ಆಕ್ರಮಣಕಾರಿಯಾಗಿ ಮಾತನಾಡುತ್ತಾರೆ. ಕೆಲವೊಮ್ಮೆ ಮೃದುವಾಗಿ ಮಾತನಾಡುವಾಗ ಯಾಕೆ ರೀತಿ ಮಾತನಾಡುತ್ತಿದ್ದಾನೆ ಅಂತ ನಮಗೂ ಅನಿಸುತ್ತದೆ. ಹೀಗಾಗಿ ಆಕ್ರಮಣಕಾರಿಯಾಗಿಯೇ ಅವರು ಇರಬೇಕು ಎಂದು ಮೈಕಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಗ್ಬಾಸ್ ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಸ್ಫರ್ಧಿಗಳು ಗೆಲ್ಲಬೇಕೆಂಬ ಹಂಬಲದೊಂದಿಗೆ ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ. ವಿನಯ್ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್, ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ನಮ್ರತಾ ಗೌಡ ಯಾರು ಟಾಪ್ ಐದು ಸ್ಫರ್ಧಿಗಳಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.