‘ಸಂಚಿನ ಸುಳಿಯಲಿ’ ಸಿಲುಕಿದ ಭೂಮಿ ಶೆಟ್ಟಿ! ಬ್ಯಾಕ್​ ಟು ಬ್ಯಾಕ್​ ಮೂರು ಚಿತ್ರಗಳಲ್ಲಿ ಬಿಜಿ

Sanchina Suliyalli_(190)
Published on

ಬಿಗ್‌ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಸದ್ಯ ಬ್ಯಾಕ್ ಟು ಬ್ಯಾಕ್ ಎರಡು ಚಿತ್ರಗಳಲ್ಲಿ ಬಿಜಿಯಿದ್ದಾರೆ. ‘ಕಿನ್ನರಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಭೂಮಿ ನಂತರ ‘ಬಿಗ್ ಬಾಸ್ ಕನ್ನಡ’ ಸೀಸನ್ 7ರಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಹೊರಬಂದ ಬಳಿಕ ತೆಲುಗು ಹಾಗೂ ಕನ್ನಡದ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಬಿಜಿಯಾದರು ಭೂಮಿ ಶೆಟ್ಟಿ. ಅದರ ಜತೆ ಜತೆಗೇ ಕೃಷಿ, ಬೈಕ್ ಟ್ರಿಪ್, ಯಕ್ಷಗಾನ ಅಂತಲೂ ಹವ್ಯಾಸ ಮುಂದುವರಿಸಿದ್ದ ಭೂಮಿ ಸದ್ಯ ಮೂರು ಕನ್ನಡ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

ಹೌದು, ಸದ್ಯ ಭೂಮಿ ಶೆಟ್ಟಿ ಮೂರು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಒಂದು ‘ಸಂಚಿನ ಸುಳಿಯಲಿ’. ಕೆಲ ದಿನಗಳ ಹಿಂದಷ್ಟೇ ಚಿತ್ರ ಸೆಟ್ಟೇರಿದ್ದು, ‘ಮುಕುಂದ ಮುರಾರಿ’, ‘ಪೊಗರು’ ಖ್ಯಾತಿಯ ನಿರ್ದೇಶಕ ನಂದಕಿಶೋರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಹಿಂದೆ ‘ಅಚಲ’, ‘ಯಾರವಳು’ ಹೀಗೆ ಬಿಡುಗಡೆಯಾಗಬೇಕಾದ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ಚನ್ನರಾಯಪಟ್ಟಣದ ಪ್ರಮೋದ್ ಎಸ್. ಆರ್ ‘ಸಂಚಿನ ಸುಳಿಯಲಿ’ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. 2014ರಲ್ಲಿ ಮೈಸೂರಿನಲ್ಲಿ ನಡೆದ ಘಟನೆಯೊಂದರ ಎಳೆಯ ಸುತ್ತ ನಿರ್ದೇಶಕ ಪ್ರಮೋದ್ ಈ ಕಥೆ ಹೆಣೆದಿದ್ದಾರೆ. ಪ್ರೀತಿಯಲ್ಲಿರುವ ಕೆಲ ಕಾಲೇಜು ಹುಡುಗರ ತಂಡವೊಂದು ನಿರ್ಜನ ಪ್ರದೇಶಕ್ಕೆ ತೆರಳುತ್ತದೆ. ಅಲ್ಲಿಗೆ ಹೋದಾಗ ಅವರು ಸಂಚಿನ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆ ಹುಡುಗ, ಹುಡುಗಿಯರ ಪರಿಸ್ಥಿತಿ ಏನಾಗುತ್ತದೆ? ಅಲ್ಲಿಂದ ತಪ್ಪಿಸಿಕೊಂಡು ಬರುತ್ತಾರಾ? ಎಂಬುದು ಚಿತ್ರದ ಕಥೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಖ್ಯಾತಿಯ ಪವನ್ ಕುಮಾರ್ ನಾಯಕನಾಗಿದ್ದು, ಅವರಿಗೆ ಭೂಮಿ ನಾಯಕಿಯಾಗಿದ್ದಾರೆ. ಗೆಳೆಯರ ಪಾತ್ರದಲ್ಲಿ ನವೀನ್, ಸ್ವಪ್ನ ಶೆಟ್ಟಿಗಾರ್ ನಟಿಸುತ್ತಿದ್ದು, ಉಳಿದಂತೆ ಶೋಭರಾಜ್, ಕಿಲ್ಲರ್ ವೆಂಕಟೇಶ್ ತಾರಾಗಣದಲ್ಲಿದ್ದಾರೆ. ಕಥೆಗೆ ಅನುಗುಣವಾಗಿ ಶೇಕಡಾ 90ರಷ್ಟು ಚಿತ್ರೀಕರಣವನ್ನು ಉಡುಪಿ ಹಾಗೂ ಉಳಿದ ಭಾಗವನ್ನು ಬೆಂಗಳೂರಿನ ಸುತ್ತಮುತ್ತ ಎರಡು ಹಂತದಲ್ಲಿ ನಡೆಸುವ ಆಲೋಚನೆ ಚಿತ್ರತಂಡದ್ದು. ಚಿತ್ರದಲ್ಲಿ ಮೂರು ಹಾಡುಗಳಿದ್ದು ಕೆವಿನ್ ಸಂಗೀತ ನೀಡಲಿದ್ದಾರೆ. ವಿನೋದ್ ಆರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ಧರ್ಮಸ್ಥಳದ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಎನ್. ನಾಗೇಗೌಡ ಹಾಗೂ ಮೈಸೂರಿನ ಫ್ಯಾಶನ್​ ಡಿಸೈನರ್ ಹಂಸ ರವಿಶಂಕರ್ ಜಂಟಿಯಾಗಿ ಮಾನ್ಯ ಕ್ರಿಯೇಶನ್ಸ್ ಬ್ಯಾನರ್‌ನ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅನಿಲ್ ಮೂಡಲಗಿ ಸಹ ನಿರ್ಮಾಪಕರಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಇದೇ ಡಿಸೆಂಬರ್‌ನಲ್ಲಿ ‘ಸಂಚಿನ ಸುಳಿಯಲಿ’ ತೆರೆಗೆ ಬರಲಿದೆ. ಭೂಮಿ ಶೆಟ್ಟಿ ನಟಿಸುತ್ತಿರುವ ಮತ್ತೊಂದು ಚಿತ್ರ ‘ಇನಾಮ್‌ದಾರ್’. ಸಂದೇಶ್ ಶೆಟ್ಟಿ ಅಜಿರಿ ನಿರ್ದೇಶನದ ಈ ಚಿತ್ರದಲ್ಲಿ ರಂಜನ್ ಛತ್ರಪತಿ ನಾಯಕನಾಗಿದ್ದು, ಅವರಿಗೆ ಭೂಮಿ ಶೆಟ್ಟಿ ನಾಯಕಿಯಾಗಿದ್ದಾರೆ. ಪ್ರಮೋದ್ ಶೆಟ್ಟಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಭೂಮಿ ನಟನೆಯ ಇನ್ನೊಂದು ಸಿನಿಮಾ ‘ವಾಸಂತಿ’. ಅದರಲ್ಲಿ ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಬಡ ಹೆಣ್ಣುಮಗಳ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net