More

    ದೇವ್ಲು, ಭಟ್ಲು ಮತ್ತು ಬೀಲು!; ‘ಗಾಳಿಪಟ 2’ ಚಿತ್ರದಲ್ಲೊಂದು ಕಿಕ್ ಏರಿಸುವ ಹಾಡು

    ಬೆಂಗಳೂರು: ‘ಹೊಂಟೋಗಿಲೋ ಹುಡ್ಗೀಲೆಲ್ಲ ತಿಲ್ಗಾ ವಾಪಸ್ ಬಂದವ್ಲೆಲ್ಲಾ ಎಲ್ಲಾ ನಿನ್ನ ಆಸಿಲ್ವಾದ ದೇವ್ಲೆ ದೇವ್ಲೆ …’ ಯೋಗರಾಜ್ ಭಟ್ ಮತ್ತು ಗಾಯಕ ವಿಜಯ್ ಪ್ರಕಾಶ್ ಅವರ ಕಾಂಬಿನೇಷನ್​ನಲ್ಲಿ ಹಲವು ಹಿಟ್ ಹಾಡುಗಳು ಬಂದಿವೆ. ‘ಖಾಲಿ ಕ್ವಾಟ್ರು ಬಾಟ್ಲು …’, ‘ನಾವ್ ಮನೆಗ್ ಹೋಗೋದಿಲ್ಲ …’, ‘ಓಪನ್ ಹೇರು ಬಿಟ್ಕೊಂಡು …’, ‘ಫೋನು ಇಲ್ಲ ಮೆಸೇಜ್ ಇಲ್ಲ …’ ಮುಂತಾದ ಹಾಡುಗಳು ಬಂದಿವೆ. ಈಗ ಇದೇ ಸಾಲಿಗೆ ‘ಗಾಳಿಪಟ 2’ ಚಿತ್ರದ ‘ದೇವ್ಲೆ ದೇವ್ಲೆ …’ ಹೊಸ ಸೇರ್ಪಡೆ. ಗುರುವಾರ ನಡೆದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಚಿತ್ರೀಕರಣದ ಅನುಭವ ಹಂಚಿಕೊಂಡಿತು. ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ‘ಮೊದಲು ಹಾಡು ರೆಕಾರ್ಡಿಂಗ್ ಮಾಡಿದ ಬಳಿಕ ಯಾಕೋ ಮಜಾ ಇಲ್ಲ ಅನ್ನಿಸುತ್ತಿತ್ತು. ಹೀಗಾಗಿ ಸಾಹಿತ್ಯದಲ್ಲಿ ರ ಬದಲು ಲ ಸೇರಿಸಿದರೆ ಹೇಗೆ ಅಂತ ಯೋಚಿಸಿದೆ’ ಎಂದು ‘ದೇವ್ಲೆ’ ಹಾಡು ಹುಟ್ಟಿಕೊಂಡ ಬಗ್ಗೆ ಹೇಳಿದರು. ಬಳಿಕ ಮಾತನಾಡಿದ ಗಾಯಕ ವಿಜಯ್ ಪ್ರಕಾಶ್, ‘ತಪ್ಪನ್ನು ಸರಿ ಮಾಡಿಕೊಂಡು ಹಾಡಬಹುದು. ಆದರೆ, ಸರಿ ಅಕ್ಷರಗಳನ್ನು ತಪ್ಪಾಗಿ ಹಾಡುವುದು ಕಷ್ಟ. ರ ಬದಲು ಲ ಸೇರಿಸಿಕೊಂಡು ಸುಮಾರು ಎರಡು ವಾರ ಪ್ರಾಕ್ಟೀಸ್ ಮಾಡಿ ಅರ್ಧ ಗಂಟೆಯಲ್ಲಿ ಹಾಡಿದೆ’ ಎಂದರು.

    ನಂತರ ಮಾತನಾಡಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ‘‘ಗಾಳಿಪಟ 2’ ನನ್ನ ಸಂಗೀತ ಜೀವನದಲ್ಲಿ ಎಂದೂ ಮರೆಯಲಾಗದ ಸಿನಿಮಾ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಮಾತಿಗಿಳಿದ ಗಣೇಶ್, ‘‘ದೇವ್ಲೆ …’ ಒಂದು ವಿಚಿತ್ರವಾದ ಹಾಡು. ಯೋಗರಾಜ್ ಭಟ್ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಧ್ವನಿ ಬಿದ್ದರೆ ಅದೇ ಕಿಕ್. ಅದಕ್ಕೆ ಆಲ್ಕೊಹಾಲ್ ಬೇಡ’ ಎಂದು ಹಾಡಿಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ಖುಷಿಯಾದರು. ಕಜಕಿಸ್ತಾನದ ಕೊರೆವ ಚಳಿಯಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದ್ದು, ತಾಂತ್ರಿಕವಾಗಿ ಎದುರಾದ ಸಮಸ್ಯೆಗಳ ಕುರಿತು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಹಾಗೂ ನೃತ್ಯ ನಿರ್ದೇಶಕ ಧನು ಹಂಚಿಕೊಂಡರು.

    ವೇದಿಕೆಯಲ್ಲಿ ದಿಗಂತ್: ಕಳೆದ ಜೂನ್ 21ರಂದು ಗೋವಾದಲ್ಲಿ ನಟ ದಿಗಂತ್ ಸ್ಟಂಟ್ ಮಾಡುವ ಸಮಯ ದಲ್ಲಿ ಬೆನ್ನು ಹಾಗೂ ಕುತ್ತಿಗೆಗೆ ಪೆಟ್ಟು ಮಾಡಿ ಕೊಂಡಿದ್ದರು. ಅಲ್ಲಿಂದ ಅವರನ್ನು ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ದಿಗಂತ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ‘ದೇವ್ಲೆ’ ಸಾಂಗ್ ಬಿಡುಗಡೆಗೂ ಆಗಮಿಸಿದ್ದರು.

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts