

ಬೆಂಗಳೂರು: ಪುನೀತ್ ರಾಜ್ಕುಮಾರ್ ಅವರ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರ "ಜೇಮ್ಸ್'. ಮಾರ್ಚ್ 17ರಂದು ಪ್ರಸಾರವಾದ "ಜೇಮ್ಸ್'ಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಅಪು$್ಪ ಅಭಿಮಾನಿಗಳು ಥಿಯೇಟರ್ಗಳಲ್ಲಿ ಹಬ್ಬದಂತೆ ಆಚರಿಸಿದರು. ಇಂತಹ "ಜೇಮ್ಸ್' ಇನ್ನು ಕೆಲವೇ ದಿನಗಳಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜುಲೈ 17ಕ್ಕೆ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಅಭಿಯಾನದ ಮೂಲಕ ಸಾವಿರಾರು ಮಕ್ಕಳ ಜೊತೆ ಸೇರಿ ವಾಹಿನಿಯವರು "ಜೇಮ್ಸ್'ಅನ್ನು ಕಿರುತೆರೆಗೆ ಬರಮಾಡಿಕೊಳ್ಳುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಮಕ್ಕಳು ಅಂದರೆ ತುಂಬ ಇಷ್ಟ. ಮಕ್ಕಳಿಗೂ ಸಹ ಅಪ್ಪು ಅಂದರೆ ಅಷ್ಟೇ ಇಷ್ಟ. ಹೀಗಾಗಿಯೇ ಸ್ಟಾರ್ ಸುವರ್ಣ ವಾಹಿನಿ "ಜೇಮ್ಸ್' ಪ್ರಪ್ರಥಮ ಬಾರಿಗೆ ಪ್ರಸಾರವಾಗುತ್ತಿರುವ ವೇಳೆಯಲ್ಲಿ ಒಂದು ವಿಶಿಷ್ಟ ಅಭಿಯಾನ ಆಯೋಜಿಸಿದೆ. ರಾಜ್ಯದಾದ್ಯಂತ ನೂರಾರು ಶಾಲೆಗಳ 40 ಸಾವಿರಕ್ಕೂ ಅಧಿಕ ಮಕ್ಕಳಿಂದ ಪುನೀತ್ ರಾಜ್ಕುಮಾರ್ ರೇಖಾಚಿತ್ರಕ್ಕೆ ಬಣ್ಣ ತುಂಬಿಸುವ ಮೂಲಕ ಅಗಲಿದ ನಟನಿಗೆ ನಮನ ಸಲ್ಲಿಸಿದೆ.
ಪುನೀತ್ ರೇಖಾಚಿತ್ರಕ್ಕೆ ಬಣ್ಣದ ತುಂಬಿದ ಮಕ್ಕಳೂ ಸಹ ಅಪು$್ಪ ಹಬ್ಬದಲ್ಲಿ ಸಂಭ್ರಮಿಸಿದ್ದಾರೆ. ವಿಶೇಷ ಅಂದರೆ ಅತ್ಯುತ್ತಮವಾಗಿ ಬಣ್ಣ ತುಂಬಿದ ಮಕ್ಕಳಿಗೆ ವಾಹಿನಿ ಕಡೆಯಿಂದ ಪ್ರಶಂಸಾ ಪತ್ರವನ್ನೂ ನೀಡಿರುವುದು ಮಕ್ಕಳ ಖುಷಿಯನ್ನು ಇಮ್ಮಡಿಗೊಳಿಸಿದೆ.
ಚೇತನ್ ಕುಮಾರ್ ನಿರ್ದೇಶನದ ಆಕ್ಷನ್ ಡ್ರಾಮಾ "ಜೇಮ್ಸ್'ನಲ್ಲಿ ಪುನೀತ್ ರಾಜ್ಕುಮಾರ್ ಭಾರತೀಯ ಸೇನೆಯ ಮೇಜರ್ ಪಾತ್ರದಲ್ಲಿ ನಟಿಸಿದ್ದರು. ಅಪ್ಪುಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದು, ಅನು ಪ್ರಭಾಕರ್, ಶ್ರೀಕಾಂತ್, ಶರತ್ ಕುಮಾರ್, ಮುಕೇಶ್ ರಿಷಿ, ಚಿಕ್ಕಣ್ಣ, ರಂಗಾಯಣ ರಘು, ಸಾಧು ಕೋಕಿಲಾ, ಶೈನ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಪದ್ಮಜಾ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಚರಣ್ ರಾಜ್ ಸಂಗೀತ ನೀಡಿರುವ ಚಿತ್ರವನ್ನು ಕಿಶೋರ್ ಪತ್ತಿಕೊಂಡ ನಿರ್ಮಾಣದಲ್ಲಿ ಮೂಡಿಬಂದಿತ್ತು.
ಚಿತ್ರದ ಡಬ್ಬಿಂಗ್ಗೂ ಮುನ್ನವೇ ಪುನೀತ್ ರಾಜ್ಕುಮಾರ್ ವಿಧಿವಶರಾದ ಕಾರಣ ಚಿತ್ರತಂಡ ಶಿವರಾಜ್ಕುಮಾರ್ ಅವರಿಂದ ಪುನೀತ್ ಪಾತ್ರಕ್ಕೆ ವಾಯ್ಸ್ ಡಬ್ ಮಾಡಿಸಿತ್ತು. ಬಳಿಕ ಹೈದರಾಬಾದ್ ಸಂಸ್ಥೆಯೊಂದರ ಸಹಯೋಗದೊಂದಿಗೆ ಪುನೀತ್ ಅವರ ಧ್ವನಿಯಲ್ಲೇ ಮರುಸೃಷ್ಟಿಸಿದ ಚಿತ್ರತಂಡ ಏಪ್ರಿಲ್ 22ರಂದು ಮತ್ತೊಮ್ಮೆ "ಜೇಮ್ಸ್' ರಿಲೀಸ್ ಮಾಡಿತ್ತು. ಅದಕ್ಕೂ ಮುನ್ನ ಅರ್ಥಾತ್ ಏಪ್ರಿಲ್ 14ರಂದು ಚಿತ್ರದ ಓಟಿಟಿ ರಿಲೀಸ್ ಆಗಿತ್ತಾದರೂ, ರೀ-ರಿಲೀಸ್ನಲ್ಲೂ "ಜೇಮ್ಸ್' ರಾಜ್ಯದ ಹಲವೆಡೆ ಹೌಸ್ಫುಲ್ ಪ್ರದರ್ಶನ ಕಂಡಿತ್ತು.