

ಬೆಂಗಳೂರು: ಕೆನಡಾದ ಪಲ್ಸರ್ ಮ್ಯೂಸಿಕ್ ಸಂಸ್ಥೆಯು ಹಮ್ಮಿಕೊಂಡ ಜಾಗತಿಕ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಹಾಡುಗಾರಿಕೆ ವಿಭಾಗದಲ್ಲಿ ಬೆಂಗಳೂರಿನ ಪೊಲವರಪು ಸಾದ್ಯಾ ಪ್ರಥಮ ಪ್ರಶಸ್ತಿ ಪಡೆಯುವ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಇದೊಂದು ಜಾಗತಿಕ ವೇದಿಕೆಯಾಗಿದ್ದು, ‘ರೆಡ್ ಮ್ಯಾಪಲ್ ಮ್ಯೂಸಿಕ್ ಕಾಂಪಿಟಿಷನ್ ಸ್ಪ್ರಿಂಗ್ ಸೀಸನ್ 2023’ ಹೆಸರಿನ ಸಂಗೀತ ಸ್ಪರ್ಧೆಯನ್ನು ಆನ್‌ಲೈನ್ ಮೂಲಕ ಏರ್ಪಡಿಸಲಾಗಿತ್ತು. ಭಾರತದಿಂದ ಸಾದ್ಯಾ ಅವರಿಗೆ ಮಾತ್ರ ಈ ಪ್ರಶಸ್ತಿ ಲಭಿಸಿದೆ.
9 ರಿಂದ 10 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಸಾದ್ಯಾ ಅವರು ಹಾಡುಗಾರಿಕೆ ವಿಭಾಗದಲ್ಲಿ ಶ್ರೇಷ್ಠ ಸಾಧನೆ ಮಾಡಿದರು. ಇವರು ಬೆಂಗಳೂರಿನ ದಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ (ಟಿಐಎಸ್‌ಬಿ) 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಆಗಸ್ಟ್ 9 ರಿಂದ 11 ರವರೆಗೆ ಕೆನಡಾದ ಟೊರಾಂಟೊದಲ್ಲಿ ಸಂಗೀತ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಇದ್ದು, ಸಾದ್ಯಾ ಅವರು ಇತರ ಪ್ರಶಸ್ತಿ ವಿಜೇತರ ಜತೆಗೆ ಈ ವಿಶ್ವ ವೇದಿಕೆಯಲ್ಲಿ ಮತ್ತೊಮ್ಮೆ ತಮ್ಮ ಪ್ರತಿಭೆ ಪ್ರದರ್ಶಿಸಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸಾದ್ಯಾ ಅವರು ನಾಲ್ಕನೇ ವಯಸ್ಸಿನಿಂದಲೇ ಕರ್ನಾಟಿಕ್ ಸಂಗೀತ ಮತ್ತು ಪಾಶ್ಚಿಮಾತ್ಯ ಹಾಡುಗಾರಿಕೆಯನ್ನು ಶ್ರೀ ಫನಿರಾಜ್ ಗುರು ಮತ್ತು ಅಶ್ಲೇ ವಿಲಿಯಮ್ಸ್ ಅವರಿಂದ ಅಭ್ಯಾಸ ಮಾಡುತ್ತಿದ್ದಾರೆ. ಯಡಾದ್ರಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಪ್ರಥಮ ಬ್ರಹ್ಮೋತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಇವರು ಬೆಂಗಳೂರಿನ ವೈದ್ಯ ದಂಪತಿ ಡಾ. ಸ್ವೈರಾ ರಾವ್ ಮತ್ತು ಡಾ. ಸಿರಿ ಕೃಷ್ಣ ಅವರ ಪುತ್ರಿ.