ರಾಬರ್ಟ್​ ಪೈರಸಿ: ಸುದೀಪ್​-ದರ್ಶನ್​ ಫ್ಯಾನ್ಸ್​ ನಡುವೆ ಕಿಡಿ ಹೊತ್ತಿಸಿದ ಆರೋಪಿ ಹೇಳಿಕೆ..!

Sudeep Darshan
Published on

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಪೈರಸಿ ಮಾಡುತ್ತಿದ್ದ ಆರೋಪಿಯನ್ನು ದರ್ಶನ್ ಅಭಿಮಾನಿಗಳು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ.

ಇದರ ಬೆನ್ನಲ್ಲೇ ಆರೋಪಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮಾತನಾಡಿರುವ ಆರೋಪಿ ವಿಶ್ವನಾಥ್​, ನಾನು ಕಿಚ್ಚು ಸುದೀಪ್​ ಅಭಿಮಾನಿ. ನಾನು ಮತ್ತು ಅವರು ಒಂದೇ ಜಾತಿ ಆಗಿರುವುದರಿಂದ ರಾಬರ್ಟ್​ ಸಿನಿಮಾ ಶೇರ್​ ಮಾಡಿದೆ ಎಂದು ಹೇಳಿದ್ದಾನೆ.

ಸುದೀಪ್​ ಅವರಾಗಲಿ, ಅವರ ಕಡೆ ಹುಡುಗರಾಗಲಿ ಯಾರೂ ಹೇಳಿಕೊಟ್ಟಿಲ್ಲ. ಅಭಿಮಾನದಿಂದಾಗಿ ಹೀಗೆ ಮಾಡಿದೆ. ನಾನು ದರ್ಶನ್​ ಸರ್​ ಹಾಗೂ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಇನ್ನೆಂದು ಯಾವುದೇ ಕನ್ನಡ ಚಿತ್ರದ ಲಿಂಕ್​ ಶೇರ್​ ಮಾಡುವುದಿಲ್ಲ ಎಂದು ತಿಳಿಸಿದ್ದಾನೆ.

ರಾಬರ್ಟ್​ ಚಿತ್ರ ಪೈರಸಿ ಕುರಿತು ಉಮಾಪತಿ ಫಿಲ್ಮ್ ವ್ಯವಸ್ಥಾಪಕ ಮಂಜುನಾಥ ನೀಡಿದ ದೂರಿನ ಅನ್ವಯ ಆರೋಪಿ ವಿಶ್ವನಾಥ್​ನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿಶ್ವನಾಥ್ ರಾಬರ್ಟ್ ಚಿತ್ರದ ಲಿಂಕ್ ಶೇರ್ ಮಾಡುತ್ತಿದ್ದ. ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಂ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್​ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಎಚ್​ಡಿ ಪ್ರಿಂಟ್ ಪಡೆಯುವ ಸೋಗಿನಲ್ಲಿ ದರ್ಶನ್​ ಅಭಿಮಾನಿಗಳು ಆರೋಪಿಯನ್ನು ಸೆರೆಹಿಡಿದಿದ್ದಾರೆ.

ನಮಗೆ ಎಚ್​ಡಿ ಪ್ರಿಂಟ್ ಬೇಕು ಅಂತ ದರ್ಶನ್ ಅಭಿಮಾನಿಗಳು ಕೇಳಿದ್ದರು. ಇದಕ್ಕೆ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದ ವಿಶ್ವನಾಥ್​ನನ್ನು ಹಣ ಕೊಡುವುದಾಗಿ ನಂಬಿಸಿ ಆತನನ್ನು ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ಮಾತುಕತೆಗೆ ಕರೆಸಿಕೊಂಡು ಅಭಿಮಾನಿಗಳು ಸೆರೆಹಿಡಿದಿದ್ದಾರೆ.

ಶನಿವಾರವಷ್ಟೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಒಬ್ಬ ಆರೋಪಿಯನ್ನು ಅಭಿಮಾನಿಗಳು ಹಿಡಿದುಕೊಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net