

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಪೈರಸಿ ಮಾಡುತ್ತಿದ್ದ ಆರೋಪಿಯನ್ನು ದರ್ಶನ್ ಅಭಿಮಾನಿಗಳು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ.
ಪೈರಸಿ ಕುರಿತು ಉಮಾಪತಿ ಫಿಲ್ಮ್ ವ್ಯವಸ್ಥಾಪಕ ಮಂಜುನಾಥ ನೀಡಿದ ದೂರಿನ ಅನ್ವಯ ಆರೋಪಿ ವಿಶ್ವನಾಥ್ನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿಶ್ವನಾಥ್ ರಾಬರ್ಟ್ ಚಿತ್ರದ ಲಿಂಕ್ ಶೇರ್ ಮಾಡುತ್ತಿದ್ದ. ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಎಚ್ಡಿ ಪ್ರಿಂಟ್ ಪಡೆಯುವ ಸೋಗಿನಲ್ಲಿ ದರ್ಶನ್ ಅಭಿಮಾನಿಗಳು ಆರೋಪಿಯನ್ನು ಸೆರೆಹಿಡಿದಿದ್ದಾರೆ.
ನಮಗೆ ಎಚ್ಡಿ ಪ್ರಿಂಟ್ ಬೇಕು ಅಂತ ದರ್ಶನ್ ಅಭಿಮಾನಿಗಳು ಕೇಳಿದ್ದರು. ಇದಕ್ಕೆ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದ ವಿಶ್ವನಾಥ್ನನ್ನು ಹಣ ಕೊಡುವುದಾಗಿ ನಂಬಿಸಿ ಆತನನ್ನು ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ಮಾತುಕತೆಗೆ ಕರೆಸಿಕೊಂಡು ಅಭಿಮಾನಿಗಳು ಸೆರೆಹಿಡಿದಿದ್ದಾರೆ.
ಶನಿವಾರವಷ್ಟೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಒಬ್ಬ ಆರೋಪಿಯನ್ನು ಅಭಿಮಾನಿಗಳು ಹಿಡಿದುಕೊಟ್ಟಿದ್ದರು.