ಸಿಆರ್​ಪಿಎಫ್​ ಕ್ಯಾಂಪಸ್​ನಲ್ಲೇ ಪ್ರೇಯಸಿಗೆ ತಾಳಿಕಟ್ಟಿದ ಪೇದೆ; ಮದ್ವೆ ಬೆನ್ನಲ್ಲೇ ಯುವತಿಗೆ ಬಿಗ್​ ಶಾಕ್​!

CRPF 1
Published on

ಬೆಂಗಳೂರು: ಊರಿಗೆ ಹೋದ ನನ್ನ ಗಂಡ ಮರಳಿ ಬಂದಿಲ್ಲ. ನಾಪತ್ತೆಯಾಗಿರುವ ಅವರನ್ನು ಹುಡುಕಿಕೊಡಿ ಎಂದು ಯುವತಿಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಇದಕ್ಕೆಲ್ಲ ಕಾರಣ ಪತಿಯ ಪಾಲಕರು ಎಂದು ಆರೋಪಿಸಿದ್ದಾಳೆ.

ಪತಿಯನ್ನು ಹುಡುಕಿಕೊಡುವಂತೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ಎದುರು ಯುವತಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾಳೆ.

ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರ ಗ್ರಾಮದ ಯುವತಿ ಅನುಜಾ ಅದೇ ಗ್ರಾಮದ ಸಿಆರ್​ಪಿಎಫ್​ ಪೇದೆ ಪ್ರಮೋದ್ ಇಬ್ಬರು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಆದರೆ ಇಬ್ಬರ ಪ್ರೀತಿಗೆ ಪ್ರಮೋದ್​ ಪಾಲಕರಿಂದ ಒಪ್ಪಿಗೆ ಇರಲಿಲ್ಲವಂತೆ. ಆದಾಗ್ಯು ಇದೇ ಫೆಬ್ರವರಿ 19 ರಂದು ಅನುಜಾ ಜತೆ ಯಲಹಂಕದ ಸಿಆರ್​ಪಿಎಫ್​ ಕ್ಯಾಂಪಸ್​ನಲ್ಲೇ ಪ್ರಮೋದ್ ತಾಳಿಕಟ್ಟಿ ಮದುವೆಯಾಗಿದ್ದಾನೆ.

ಮದುವೆಯಾದ ಮಾರನೇ ದಿನ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಪ್ರಮೋದ್ ತಂದೆ ಮತ್ತು ಸಹೋದರ ಆತನನ್ನು ಕರೆದೊಯ್ದಿದರು. ಆದರೆ, ಇದುವರೆಗೂ ಪತ್ತೆಯಾಗಿಲ್ಲ. ಫೋನ್​ ಮಾಡಿದ್ರೆ ಪ್ರಮೋದ್​ ಪಾಲರು ರಿಸೀವ್​ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಾರೆಂದು ಅನುಜಾ ದೂರಿದ್ದಾರೆ.

ಇದರಿಂದ ನೊಂದಿರುವ ಅನುಜಾ ಬುಧವಾರ ರಾತ್ರಿ ನಂದಗುಡಿ ಪೊಲೀಸ್ ಠಾಣೆ ಮುಂದೆ ಪೋಷಕರ ಜತೆಗೂಡಿ ಪ್ರತಿಭಟನೆ ನಡೆಸಿದ್ದಾಳೆ. ಜತೆಗೆ ಮತ್ತೊಬ್ಬಳ ಜತೆ ವಿವಾಹಕ್ಕೆ ಸಿದ್ಧತೆ ಆರೋಪ ಮಾಡಿರುವ ಯುವತಿ, ಇದರಲ್ಲಿ ನನ್ನ ಗಂಡನದ್ದು ಯಾವುದೇ ತಪ್ಪಿಲ್ಲ. ಎಲ್ಲ ಅವರ ಪಾಲಕರದ್ದೇ ಕೈವಾಡ. ನನಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದಾಳೆ.

ಅಲ್ಲದೆ ಈ ಬಗ್ಗೆ ದೂರು ನೀಡಿ ಎರಡು ತಿಂಗಳಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನುಜಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯರಾತ್ರಿ ಪ್ರತಿಭಟನೆ ನಡೆಸಿದ ಅನುಜಾಳಿಗೆ ಪತಿಯನ್ನು ಹುಡುಕಿಕೊಡುವುದಾಗಿ‌ ಭರವಸೆ ನೀಡಿ ಪೊಲೀಸರು ಕಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net