More

    ಇಂದು ಕಿಡ್ನಿ ದಿನ: ಮೂತ್ರಪಿಂಡ ನಿರ್ಲಕ್ಷಿಸಿದರೆ ತೆರಬೇಕಾದೀತು ಭಾರಿ ದಂಡ!

    ಪಂಕಜ ಕೆ.ಎಂ, ಬೆಂಗಳೂರು

    ಅಂಗಾಂಗಗಳ ಬೇಡಿಕೆಯಲ್ಲಿ ‘ಕಿಡ್ನಿ’ಗೆ ಬಹಳ ಬೇಡಿಕೆ. ಪ್ರಸ್ತುತ ರಾಜ್ಯದಲ್ಲಿ 3,405 ರೋಗಿಗಳು ಕಿಡ್ನಿ ಕಸಿಗಾಗಿ ಕಾಯುತ್ತಿದ್ದರೆ, ನಾನಾ ಅಂಗಾಂಗಗಳ ಕಸಿಗಾಗಿ 4,095 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಶೇ.70 (3,405) ರೋಗಿಗಳು ಕಿಡ್ನಿ ಕಸಿಗಾಗಿಯೇ ಸರತಿಯಲ್ಲಿದ್ದಾರೆ. ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದರ ಪರಿಣಾಮವಾಗಿ ಕಿಡ್ನಿ ವೈಫಲ್ಯತೆ ಜನರನ್ನು ಬಾಧಿಸುತ್ತಿದೆ. ಹೀಗಾಗಿ ಕಿಡ್ನಿ ಕಸಿಗಾಗಿ ಹೆಸರು ನೋಂದಾಯಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

    ಮಧುಮೇಹ, ಅಧಿಕ ರಕ್ತದೊತ್ತಡ, ನೋವು ನಿವಾರಕ ಮಾತ್ರೆಗಳ ಅತಿಯಾದ ಸೇವನೆ, ವಂಶವಾಹಿನಿ ಹೀಗೆ ನಾನಾ ಕಾರಣಗಳಿಂದ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಶೇ.20 ಪ್ರಕರಣಗಳಲ್ಲಿ ಕಾರಣವೇ ತಿಳಿಯುವುದಿಲ್ಲ. ಕಿಡ್ನಿ ಸ್ಟೋನ್, ಕಿಡ್ನಿ ಸೋಂಕು, ಕಿಡ್ನಿ ಕ್ಯಾನ್ಸರ್, ರಕ್ತನಾಳದ ತೊಂದರೆ, ಕಿಡ್ನಿ ನೀರುಗುಳ್ಳೆ ಸೇರಿ ಹಲವು ಬಗೆಯ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಕಿಡ್ನಿ ವೈಫಲ್ಯವಾಗಿ ಕಸಿ ಅನಿವಾರ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.

    ಲಾಕ್​ಡೌನ್​ನಲ್ಲಿ ಸಮಸ್ಯೆ: ಕಳೆದ ವರ್ಷ ದೇಶವನ್ನು ಆವರಿಸಿದ ಕರೊನಾ ವೈರಸ್ ನಿಯಂತ್ರಣಕ್ಕಾಗಿ ವಿಧಿಸಿದ ಲಾಕ್​ಡೌನ್ ಪರಿಣಾಮ 2020ರಲ್ಲಿ ಸುಮಾರು 5-6 ತಿಂಗಳ ಕಾಲ ಅಂಗಾಂಗ ಕಸಿ ನಡೆಯಲೇ ಇಲ್ಲ. ಇದರ ಪರಿಣಾಮ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗಳಿಗೆ ಕುಟುಂಬದವರೇ ಕಿಡ್ನಿ ನೀಡಲು ಮುಂದೆ ಬಂದರೂ ಸಕಾಲದಲ್ಲಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗಲಿಲ್ಲ. ಇನ್ನು ಮೆದುಳು ನಿಷ್ಕ್ರಿಯಗೊಂಡ ದಾನಿಗಳ ಕುಟುಂಬದ ಸದಸ್ಯರು ಕರೊನಾ ಸೋಂಕು ಪರೀಕ್ಷೆ ಸೇರಿ ದೀರ್ಘಕಾಲಿನ ಪ್ರಕ್ರಿಯೆಯಿಂದಾಗಿ ಅಂಗಾಂಗ ದಾನಕ್ಕೆ ಮುಂದಾಗಲಿಲ್ಲ. ಉಳಿದಂತೆ ಬಹುತೇಕ ರೋಗಿಗಳು ಕೋವಿಡ್ ಭೀತಿಯಿಂದಾಗಿ ಕಸಿ ಶಸ್ತ್ರಚಿಕಿತ್ಸೆಗೆ ಒಪ್ಪಲಿಲ್ಲ. ಹೀಗೆ ಹಲವಾರು ಕಾರಣಗಳಿಂದ ಅಂಗಾಂಗ ಕಸಿ ನಿರ್ದಿಷ್ಟ್ರ ಪ್ರಮಾಣದಲ್ಲಿ ನಡೆಯಲಿಲ್ಲ.

    ಎಚ್ಚರಿಕೆ ಕ್ರಮಗಳು: ನಿಯಮಿತ ವ್ಯಾಯಾಮ, ಸಮಯಕ್ಕೆ ಸರಿಯಾಗಿ ತಾಜಾ ಆಹಾರ ಸೇವನೆ ಮತ್ತು ನಿದ್ರೆ ಮಾಡುವುದು, ಊಟದಲ್ಲಿ ಮೇಲುಪ್ಪು ಬಳಸಬಾರದು, ಹೆಚ್ಚು ನೀರು ಕುಡಿಯಬೇಕು, ಗರ್ಭಿಣಿಯರು ನಿಯಮಿತವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು.

    ಅಂಗಾಂಗ ದಾನದಲ್ಲಿ ಸ್ತ್ರೀಯರೇ ಮುಂದು: ಕಿಡ್ನಿ ದಾನದಲ್ಲಿ ಮಹಿಳೆಯರೇ ಮುಂದಿದ್ದು, ಪ್ರತಿ 10 ಮಂದಿ ದಾನಿಗಳಲ್ಲಿ 7 ಮಹಿಳೆಯರೇ ಇರುತ್ತಾರೆ. ಆದರೆ ಕಿಡ್ನಿ ಕಸಿ ಹಾಗೂ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುವುದರಲ್ಲಿ ಮಹಿಳೆಯರು ಪುರುಷರಿಗಿಂತ ಹಿಂದಿದ್ದಾರೆ. ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಕಿಡ್ನಿ ಸಮಸ್ಯೆಗೆ ಆರಂಭದಲ್ಲೇ ಚಿಕಿತ್ಸೆ ಪಡೆಯದ ಕಾರಣ ಕಿಡ್ನಿ ಕಸಿಗಾಗಿ ಕಾಯುತ್ತಿರುವ 3,405 ರೋಗಿಗಳಲ್ಲಿ ಮಹಿಳೆಯರೇ ಹೆಚ್ಚಿನವರಿದ್ದಾರೆ.

    ನಗರದ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ನಡೆದಿರುವ ‘ಕಿಡ್ನಿ ಕಸಿ’ ಶಸ್ತ್ರಚಿಕಿತ್ಸೆ ಸಂದರ್ಭಗಳಲ್ಲಿ ಕಿಡ್ನಿ ದಾನ ಮಾಡಿರುವವರಲ್ಲಿ ಶೇ.80 ಮಹಿಳೆಯರೇ ಇದ್ದಾರೆ. ಬೆರಳೆಣಿಕೆಯಷ್ಟು ಮಂದಿ ಪುರುಷರು ಎನ್ನುತ್ತಾರೆ ಸಂಸ್ಥೆಯ ತಜ್ಞರು.

    ಕೋಟ್

    ‘ಕಿಡ್ನಿ ಸಮಸ್ಯೆ ರೋಗ ಲಕ್ಷಣಗಳನ್ನು ಅರಿತು ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಧುಮೇಹ, ರಕ್ತದೊತ್ತಡ ಇರುವವರು ಪ್ರತಿ ಆರು ತಿಂಗಳಿಗೊಮ್ಮೆ ಮೂತ್ರಪಿಂಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಉಳಿದಂತೆ 40 ವರ್ಷ ಮೇಲ್ಪಟ್ಟ ಎಲ್ಲರೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅನುವಂಶಿಕವಾಗಿ ಕಿಡ್ನಿ ಸಮಸ್ಯೆ ಇದ್ದಲ್ಲಿ ಅಂತಹವರು ಎಚ್ಚರಿಕೆ ವಹಿಸಬೇಕು’

    | ಡಾ.ಆರ್.ಕೇಶವಮೂರ್ತಿ ನಿರ್ದೇಶಕರು ಮತ್ತು ಪ್ರಾಧ್ಯಾಪಕರು, ಯುರಾಲಜಿ ವಿಭಾಗ, ನೆಫ್ರೋ ಯುರಾಲಜಿ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts