More

    ಕಹಳೆ ಊದಿದ ಕೋಟಿಗೊಬ್ಬ: ಮಾರ್ಚ್​ 15 ರಿಂದ ಪ್ರಚಾರ ಪ್ರಾರಂಭ

    ಬೆಂಗಳೂರು: ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರವು ಏಪ್ರಿಲ್ 23ರಂದು ರಾಜ್ಯದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಆದರೆ, ಇದುವರೆಗೂ ಚಿತ್ರದ ಪ್ರಚಾರ ಶುರುವಾಗಿಲ್ಲ ಎಂಬ ಬೇಸರ ಸುದೀಪ್ ಅವರ ಅಭಿಮಾನಿಗಳಲ್ಲಿತ್ತು.

    ಇತ್ತೀಚೆಗಷ್ಟೇ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಮಾರ್ಚ್ 15ರಿಂದ ಚಿತ್ರದ ಪ್ರಚಾರವನ್ನು ಪ್ರಾರಂಭಿಸಲು ನಿರ್ವಪಕ ಸೂರಪ್ಪ ಬಾಬು ಮುಂದಾಗಿದ್ದಾರೆ. ಮೊದಲ ಹಂತವಾಗಿ, ಅಂದು ಸಂಜೆ ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಲ್ಲದೆ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗವಹಿಸುವ ಸಾಧ್ಯತೆ ಇದೆ.

    ಚಿತ್ರರಂಗದಲ್ಲಿ ಸುದೀಪ್ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಅಂದು ಅವರನ್ನು ಸನ್ಮಾನಿಸಲಾಗುತ್ತದಂತೆ. ಜತೆಗೆ, ಈ 25 ವರ್ಷಗಳಲ್ಲಿ ಅವರು ನಡೆದು ಬಂದ ಹಾದಿಯ ಬಗ್ಗೆ ವಿಶೇಷ ವಿಡಿಯೋ ಪ್ರದರ್ಶಿಸಲಾಗುವುದರ ಜತೆಗೆ ಚಿತ್ರದ ಹಾಡುಗಳ ನೃತ್ಯ ಪ್ರದರ್ಶನ ಸಹ ಆಯೋಜಿಸಲಾಗಿದೆ. ಅಲ್ಲಿಂದ ‘ಕೋಟಿಗೊಬ್ಬ 3’ ಚಿತ್ರದ ಪ್ರಚಾರ ಕೆಲಸಗಳು ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ.

    ಕನ್ನಡದ ಮಾಸ್ಟರ್ ಷೆಫ್

    ಸದ್ಯ ಕಿರುತೆರೆಯಲ್ಲಿ ‘ಬಿಗ್​ಬಾಸ್’ ಕಾರ್ಯಕ್ರಮ ನಡೆಸಿಕೊಡುತ್ತಿರುವ ಸುದೀಪ್, ಅದರ ನಂತರ ಇನ್ನೊಂದು ದೊಡ್ಡ ರಿಯಾಲಿಟಿ ಶೋವೊಂದನ್ನು ನಡೆಸಿಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷವೆಂದರೆ, ಇದೊಂದು ಕುಕರಿ ಶೋ ಆಗಿದ್ದು, ‘ಪಾಕಪ್ರವೀಣ’ ಎಂದು ಗುರುತಿಸಿಕೊಂಡಿರುವ ಸುದೀಪ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

    ಅಂತಾರಾಷ್ಟ್ರೀಯ ಖ್ಯಾತಿಯ ‘ಮಾಸ್ಟರ್ ಚೆಫ್’ ಕಾರ್ಯಕ್ರಮದ ದೇಶೀ ವರ್ಷನ್ ಇದಾಗಿದ್ದು, ಈ ಕಾರ್ಯಕ್ರಮವು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಪ್ರಸಾರವಾಗಲಿದೆಯಂತೆ. ಕನ್ನಡದ ‘ಮಾಸ್ಟರ್ ಚೆಫ್’ ಕಾರ್ಯಕ್ರಮವನ್ನು ಸುದೀಪ್ ನಡೆಸಿಕೊಟ್ಟರೆ, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ವೆಂಕಟೇಶ್ ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಡೆಸಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಕ್ರಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts