More

    ಬೆಳೆಗಳ ಹಾನಿಯ ಸಮೀಕ್ಷೆ ನಡೆಸಲು ಆಗ್ರಹ

    ದಾವಣಗೆರೆ : ನೀರಿನ ಅಭಾವ, ಬಿಸಿಲಿನ ತಾಪದಿಂದ ಒಣಗಿರುವ ಕಬ್ಬು, ಅಡಕೆ, ತೆಂಗು, ಬಾಳೆ ಬೆಳೆಗಳ ಹಾನಿಯ ಸಮೀಕ್ಷೆ ನಡೆಸುವಂತೆ ಜಿಲ್ಲಾ ರೈತರ ಒಕ್ಕೂಟ ಮತ್ತು ಕುಕ್ಕುವಾಡ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿವೆ.
     ಎರಡೂ ಸಂಘಟನೆಗಳ ಮುಖಂಡರು ಗುರುವಾರ ಈ ಕುರಿತು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
     ಕುಕ್ಕುವಾಡ ಗ್ರಾಮದಲ್ಲಿರುವ ದಾವಣಗೆರೆ ಸಕ್ಕರೆ ಕಂಪನಿ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ಕಬ್ಬು ಮತ್ತು ಜಿಲ್ಲೆಯಾದ್ಯಂತ 10-20 ವರ್ಷಗಳಿಂದ ಬೆಳೆಸಿರುವ ಅಡಕೆ ಮತ್ತು ತೆಂಗಿನ ತೋಟಗಳು ಸಂಪೂರ್ಣ ಒಣಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ. ರೈತರು ಸಾಕಿದ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
     ಅವೈಜ್ಞಾನಿಕ ವೇಳಾಪಟ್ಟಿಯಿಂದ ಭದ್ರಾ ನೀರು ಸಿಗದೆ, ಮಳೆಯೂ ಇಲ್ಲದೆ, ಕೊಳವೆಬಾವಿಗಳು ಬತ್ತಿ ಹೋಗಿವೆ. ಬೇಸಿಗೆಯ ಬಿರು ಬಿಸಿಲಿನ ಹೊಡೆತಕ್ಕೆ ರೈತ ತತ್ತರಿಸಿದ್ದಾನೆ ಎಂದು ತಿಳಿಸಿದರು.
     ಬೆಳೆ ನಾಶದಿಂದಾಗಿರುವ ನಷ್ಟದ ಅಂದಾಜು ಸಮೀಕ್ಷೆಯಲ್ಲಿ, ರೈತರು ಸಾಲ ಮಾಡಿ ಖರೀದಿಸಿ ಬಿತ್ತಿದ ಬೀಜ, ಹಾಕಿದ ಗೊಬ್ಬರ, ಕ್ರಿಮಿನಾಶಕಗಳ ವೆಚ್ಚ ಸೇರಿ ಜಮೀನು ಉಳುಮೆ, ರೈತನ ಕುಟುಂಬದ ಶ್ರಮ ಮತ್ತು ಕೂಲಿ ವೆಚ್ಚ ಸೇರಿಸಬೇಕು ಎಂದು ಆಗ್ರಹಿಸಿದರು.
     ಅಂತರ್ಜಲ ಮಟ್ಟ ಕುಸಿದಿರುವ ಕೊಳವೆಬಾವಿಗಳ ಸಮೀಕ್ಷೆ ನಡೆಸಿ ಜಲ ಮರುಪೂರಣಕ್ಕೆ ಕ್ರಮ ಕೈಗೊಳ್ಳಬೇಕು. ಕೆಲವು ಜಾನುವಾರುಗಳು ಮೃತಪಟ್ಟಿವೆ. ಕೆಲವನ್ನು ರೈತರು ಸಾಕಲಾಗದೆ ಮಾರಾಟ ಮಾಡಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
     ಸಮೀಕ್ಷೆ ನಡೆಸಲು ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಅಧಿಕಾರಿಗಳ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
     ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೆಂಕಟೇಶ್, ಒಣಗಿರುವ ಬೆಳೆ ಹಾನಿ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ನೀಡಬೇಕು. ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
     ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್, ಬಲ್ಲೂರು ರವಿಕುಮಾರ, ರಾಘವೇಂದ್ರ ನಾಯ್ಕ್, ಜಿ.ಸಿ. ನಿಂಗಪ್ಪ, ರುದ್ರೆಗೌಡ್ರು, ಡಿ.ಬಿ. ಶಂಕರ್, ಕೆ.ಸಿ.ಶಿವಕುಮಾರ, ಕೆ.ಜಿ.ರವಿಕುಮಾರ, ಬಲ್ಲೂರು ಬಸವರಾಜು, ದಿಳ್ಳೆಪ್ಪ, ಶಂಭುಲಿಂಗನಗೌಡ್ರು, ಚನ್ನಪ್ಪ, ಕೆ.ಶರಣಪ್ಪ, ಗುತ್ನಾಳ ಮಂಜುನಾಥ, ಶ್ರೀನಿವಾಸ ಇದ್ದರು.
     …
     (ಬಾಕ್ಸ್)
     ಸಕ್ಕರೆ ಕಾರ್ಖಾನೆಯಿಂದಲೇ ಬೆಳೆ ಸರ್ವೇ
     ಕುಕ್ಕುವಾಡ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಒಣಗಿ ನಾಶವಾಗಿರುವ ಕಬ್ಬಿನ ಬೆಳೆಯ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ದಾವಣಗೆರೆ ಸಕ್ಕರೆ ಕಂಪನಿ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಗಣೇಶ್ ಹೇಳಿದರು.
     ತಮ್ಮ ಕಚೇರಿಯಲ್ಲಿ ಗುರುವಾರ ಭೇಟಿ ಮಾಡಿದ ರೈತರ ನಿಯೋಗಕ್ಕೆ ಅವರು ಈ ಭರವಸೆ ನೀಡಿದರು. ಬಾಕಿ ಇರುವ ಕಬ್ಬಿನ ಬಿಲ್ ಅನ್ನು 2-3 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts