More

    ಬೇತೂರು ಕೆರೆಯಲ್ಲಿ ಮೀನುಗಳ ಸಂಶಯಾಸ್ಪದ ಸಾವು

    ದಾವಣಗೆರೆ : ಸಮೀಪದ ಬೇತೂರು ಗ್ರಾಮದ ಕೆರೆಯಲ್ಲಿ 5 ಲಕ್ಷ ರೂ. ಮೌಲ್ಯದ 4 ಟನ್‌ಗಳಷ್ಟು ಮೀನುಗಳು ಸಂಶಯಾಸ್ಪದವಾಗಿ ಮೃತಪಟ್ಟಿವೆ.
     ಮೀನುಗಳ ಸಾವಿಗೆ ಖಚಿತ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳು ಕೆರೆಗೆ ವಿಷ ಬೆರೆಸಿದ್ದರಿಂದ ಮೀನುಗಳು ಮೃತಪಟ್ಟಿರಬಹುದು ಎಂಬ ಆರೋಪ ಕೇಳಿಬಂದಿದೆ.
     ಕೆರೆಯು 67 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಮೀನು ಹಿಡಿಯಲು ಮಾಗಾನಹಳ್ಳಿ ಶ್ರೀ ವೆಂಕಟೇಶ್ವರ ಮೀನುಗಾರರ ಸಹಕಾರ ಸಂಘಕ್ಕೆ ಗುತ್ತಿಗೆ ನೀಡಲಾಗಿದೆ. ಕೆರೆಯಲ್ಲಿ ಕಟ್ಲ, ಗೌರಿ, ರೋಹು, ಮೃಗಾಲ್, ಹುಲ್ಲುಗೆಂಡೆ ಮುಂತಾದ ತಳಿಯ ಮೀನುಗಳಿವೆ.
     ಮೀನುಗಾರರು ಬುಧವಾರ ಎಂದಿನಂತೆ ಮೀನುಗಳನ್ನು ಹಿಡಿದಿದ್ದಾರೆ. ಮಧ್ಯಾಹ್ನದ ನಂತರ ಕೆರೆಯಲ್ಲಿನ ಮೀನುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಅವುಗಳಲ್ಲಿ ಅರ್ಧ ಕೆಜಿಯಿಂದ ಹಿಡಿದು 6 ಕೆಜಿ ವರೆಗಿನ ತೂಕದ ಮೀನುಗಳಿವೆ. ಸತ್ತ ಮೀನುಗಳು ಕೆರೆಯ ದಡದಲ್ಲಿ ತೇಲುತ್ತಿದ್ದು ದುರ್ವಾಸನೆ ಬರುತ್ತಿದೆ.
     ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಗುರುವಾರ ಕೆರೆಗೆ ಭೇಟಿ ನೀಡಿದ್ದರು. ಮೀನುಗಳ ಸಾವಿನ ಕುರಿತು ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದರು.
     ಮೀನುಗಳು ಈ ರೀತಿ ಸಾಯಲು ಏನು ಕಾರಣ ಎಂಬುದು ಇನ್ನೂ ಖಚಿತವಾಗಿಲ್ಲ. ಕೆರೆಯ ಬಳಿ ವಿಷದ ಬಾಟಲಿಯೊಂದು ಪತ್ತೆಯಾಗಿದ್ದು ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿರಬಹುದು ಎಂಬ ಮಾತುಗಳು ಕೇಳಿಬಂದಿವೆ. ಆದರೆ ಅಧಿಕಾರಿಗಳು ಯಾವುದೇ ನಿರ್ಧಾರಕ್ಕೆ ಬರಲು ಆಗಿಲ್ಲ. ಬಿಸಿಲಿನ ಬೇಗೆ, ನೀರು ಕಡಿಮೆ ಇರುವುದರಿಂದ ಆಮ್ಲಜನಕದ ಕೊರತೆಯಾಗಿ ಮೀನುಗಳು ಸಾವಿಗೀಡಾಗಿರಬಹುದು ಎಂದು ಮೇಲ್ನೋಟಕ್ಕೆ ಅಭಿಪ್ರಾಯಪಟ್ಟಿದ್ದಾರೆ.
     ಕೆರೆಯ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿದ್ದು ದಾವಣಗೆರೆಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯಕ್ಕೆ ಕಳಿಸಲಾಗುವುದು. ಮೀನುಗಳ ಮಾದರಿಯನ್ನು ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯಕ್ಕೆ ಕಳಿಸಲಾಗುತ್ತಿದೆ. ಪ್ರಯೋಗಾಲಯದ ವರದಿ ಬಂದ ನಂತರ ಘಟನೆಗೆ ಖಚಿತ ಕಾರಣ ತಿಳಿದು ಬರಲಿದೆ ಎಂದು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆರ್.ಎಸ್. ಮಲ್ಲೇಶ ನಾಯ್ಕ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts