|ಹರ್ಷವರ್ಧನ್ ಬ್ಯಾಡನೂರು

ಚುನಾವಣೆ ಮತ್ತು ಐಪಿಎಲ್ ಬಿಸಿ ಕಡಿಮೆಯಾದ ಬೆನ್ನಲ್ಲೇ ಕನ್ನಡದಲ್ಲಿ ಪ್ರತಿ ವಾರ ಸರಾಸರಿ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ವಾರವೂ ಹ್ಯಾಟ್ರಿಕ್ ಚಿತ್ರಗಳು ಥಿಯೇಟರ್ಗಳತ್ತ ಹೆಜ್ಜೆ ಹಾಕಿವೆ. ಹಿರಿಯ ನಟ ಬಿರಾದಾರ್ ಅಭಿನಯದ “90 ಬಿಡಿ ಮನೀಗ್ ನಡಿ’, ಮಲ್ಟಿಸ್ಟಾರರ್ “ಬೆಂಗಳೂರು ಬಾಯ್ಸ್’ ಹಾಗೂ “ನಾನು ಕುಸುಮ’ ರಿಲೀಸ್ಗೆ ರೆಡಿಯಾಗಿವೆ. ಬಕ್ರೀದ್ ಹಬ್ಬದ ಪ್ರಯುಕ್ತ ಗುರುವಾರ ರಜೆಯಿರುವ ಕಾರಣ, ಒಂದು ದಿನ ಹೆಚ್ಚುವರಿ ವೀಕೆಂಡ್ ಸಿಕ್ಕ ಖುಷಿಯಲ್ಲಿ “90 ಬಿಡಿ…’ ಗುರುವಾರವೇ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ರಾಜ್ ಬಿ.ಶೆಟ್ಟಿ ನಟನೆಯ ಟೋಬಿ ಚಿತ್ರದ ಫಸ್ಟ್ ಲುಕ್ ರಿಲೀಸ್; ಪ್ರೇಕ್ಷಕರು ಹೇಳಿದ್ದೇನು?
ಹುಡುಗರ ಕಥೆ, 90 ಬಿಡಿಸುವ ವ್ಯಥೆ
ಚಂದನ್ ಆಚಾರ್, ಸಚಿನ್, ಅಭಿಷೇಕ್, ಚಿಕ್ಕಣ್ಣ, ವೈನಿಧಿ, ಸೋನಿ ನಟಿಸಿರುವ ಚಿತ್ರ “ಬೆಂಗಳೂರು ಬಾಯ್ಸ್’ ಶುಕ್ರವಾರ ತೆರೆಗೆ ಬರುತ್ತಿದೆ. ಶಾಲಾದಿನಗಳಿಂದಲೂ ಕೊನೆಯ ಬೆಂಚ್ನಲ್ಲಿ ಕೂರುವ ನಾಲ್ವರು ಹುಡುಗರು, ಅವರ ಗೆಳೆತನ, ಶಾಲೆ, ಕಾಲೇಜು ದಿನಗಳು, ಪ್ರೀತಿ, ಜೀವನದಲ್ಲಿ ಹೇಗೆ ಸಕ್ಸಸ್ ಕಾಣುತ್ತಾರೆ ಎಂಬುದರ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಹದಿಹರೆಯದ ಹುಡುಗರ ಏಳು& ಬೀಳುಗಳು, ಸೋಲು & ಗೆಲುವುಗಳ ಕುರಿತ ಚಿತ್ರವಿದು.
ಈ 17ರ ಹರೆಯದ ಹುಡುಗರ ವಿರುದ್ಧ ಈ ವಾರ ಬಾಕ್ಸಾಫಿಸಿನಲ್ಲಿ ತೊಡೆ ತಟ್ಟಿರುವವರು ಹಿರಿಯ ಪೋಷಕ ನಟ ವೈಜನಾಥ್ ಬಿರಾದಾರ್. ಕಳೆದ ಸೋಮವಾರ (ಜೂ. 26) 71ನೇ ವಸಂತಕ್ಕೆ ಕಾಲಿಟ್ಟ ಬಿರಾದಾರ್ ಅವರಿಗೆ ಇದು 500ನೇ ಸಿನಿಮಾ. ಇದೇ ಮೊದಲ ಬಾರಿಗೆ ಅವರು ಕಮರ್ಷಿಯಲ್ ಹೀರೋ ಆಗಿ ಕಾಣಿಸಿಕೊಂಡಿರುವುದು ವಿಶೇಷ. ಈ ವಯಸ್ಸಿನಲ್ಲೂ “ಸಿಂಗಲ್ ಕಣ್ಣು ಹಾರಸ್ತಿ’ ಹಾಡಿನಲ್ಲಿ ಹುಡುಗರನ್ನೂ ನಾಚಿಸುವಂತೆ ಕುಣಿದು ಕುಪ್ಪಳಿಸಿದ್ದಾರೆ ಬಿರಾದಾರ್.

ಇದನ್ನೂ ಓದಿ: ಹಾಡಿದವರು ಮನುಷ್ಯರಲ್ಲ! ಎಐ ತಂತ್ರಜ್ಞಾನದಿಂದ ರೂಪುಗೊಂಡ ಹಾಡು
ಬಹುತಾರಾಗಣ ಮತ್ತು ಬಿರಾದಾರ್ ಬಣ
“ಬೆಂಗಳೂರು ಬಾಯ್ಸ್’ ಬಹುತಾರಾಗಣವಿರುವ ಚಿತ್ರ. ಚಂದನ್ ಆಚಾರ್, ಸಚಿನ್ ಚೆಲುವರಾಯಸ್ವಾಮಿ, ಅಭಿಷೇಕ್ ದಾಸ್, ಚಿಕ್ಕಣ್ಣ, ವೈನಿಧಿ, ಸೋನಿ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದ ಬಗ್ಗೆ ಸಚಿನ್, “ನಾಲ್ವರು ಬಾಲ್ಯದ ಗೆಳೆಯರು. ಎಂಜಿನಿಯರಿಂಗ್ ಪೂರ್ಣಗೊಳಿಸಿ, ಅವರ ಜೀವನವನ್ನು ಹೇಗೆ ರೂಪಿಸಿಕೊಳ್ಳುತ್ತಾರೆ. ಬಿರಾದಾರ್ ಸರ್ ಚಿತ್ರ ಕೂಡ ಈ ವಾರ ರಿಲೀಸ್ ಆಗುತ್ತಿದೆ. ಅವರಿಗೂ ಆಲ್ ದಿ ಬೆಸ್ಟ್. ಅವರನ್ನು ನೋಡಿಕೊಂಡು ಬೆಳೆದಿದ್ದೇವೆ, ಸಾಕಷ್ಟು ಕಲಿತಿದ್ದೇವೆ. ಹಿರಿಯ ವಯಸ್ಸಿನಲ್ಲಿ ತುಂಬ ಚೆನ್ನಾಗಿ ಮಾಡಿದ್ದಾರೆ. ಎರಡು ಚಿತ್ರಗಳಿಗೂ ಒಳ್ಳೆಯದಾಗಲಿ’ ಎಂದು ಹೇಳಿಕೊಳ್ಳುತ್ತಾರೆ.
ನಾಗರಾಜ ಅರೆಹೊಳೆ ಮತ್ತು ಉಮೇಶ್ ಬಾದರದಿನ್ನಿ ನಿರ್ದೇಶನದ ಚಿತ್ರ “90 ಬಿಡಿ ಮನೀಗ್ ನಡಿ’. ಚಿತ್ರದ ಬಗ್ಗೆ ನಾಗರಾಜ್, “ಬಿರಾದಾರ್ ಅವರ ವಯಸ್ಸು 71 ಆಗಿದ್ದರೂ, ಡಾನ್ಸ್ ವಿಷಯದಲ್ಲಿ 17. ಈ ಹಿರಿಯ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವಂತೆ ಡಾನ್ಸ್ ಮಾಡಿದ್ದಾರೆ. ಚಿತ್ರಕ್ಕೆ ಬಿರಾದಾರ್ ಅವರೇ ಶಕ್ತಿ. ವಿತರಕರು, ಹಲವು ಥಿಯೇಟರ್ ಮಾಲೀಕರು ಖುದ್ದಾಗಿ ಕರೆ ಮಾಡಿ ನಮ್ಮ ಸಿನಿಮಾ ಪ್ರದರ್ಶಿಸಲು ಮುಂದಾಗಿದ್ದಾರೆ. “ಬೆಂಗಳೂರು ಬಾಯ್ಸ್’ ಚಿತ್ರಕ್ಕೂ ಶುಭವಾಗಲಿ’ ಎನ್ನುತ್ತಾರೆ.