ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಊಟದ ಮೆನುವಿನಲ್ಲಿ ಬೀಫ್ ಬಿರಿಯಾನಿ ವಿವಾದ; ಎಎಂಯು ಆಡಳಿತ ಮಂಡಳಿ ಕೊಟ್ಟ ಸ್ಪಷ್ಟನೆ ಏನು? | Aligarh Muslim University

Untitled design - 2025-02-09T172250.495
Published on

ಲಖನೌ: ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ(Aligarh Muslim University) ಸುಲೇಮಾನ್ ಊಟದ ಹಾಲ್‌ನಲ್ಲಿ ಭಾನುವಾರ ವಿದ್ಯಾರ್ಥಿಗಳಿಗೆ ವಿಶೇಷ ಊಟವಾಗಿ ಗೋಮಾಂಸ ಬಿರಿಯಾನಿ ಬಡಿಸುವ ವಿಚಾರವಾಗಿ ಜಾರಿಯಾದ ನೋಟಿಸ್ ಸಾಮಾಜಿಕ ಜಾಲತಾಣದಲ್ಲಿ ವಿವಾದವನ್ನು ಹುಟ್ಟುಹಾಕಿತು. ಸದ್ಯ ಈ ವಿಚಾರವಾಗಿ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಸ್ಪಷ್ಟೀಕರಣವನ್ನು ನೀಡಿದೆ.

ಇಬ್ಬರು ಅಧಿಕೃತ ವ್ಯಕ್ತಿಗಳು ಹೊರಡಿಸಿರುವ ನೋಟಿಸ್‌ನಲ್ಲಿ ಭಾನುವಾರದ ಊಟದ ಮೆನುವನ್ನು ಬದಲಾಯಿಸಲಾಗಿದ್ದು ಬೇಡಿಕೆಗೆ ಅನುಗುಣವಾಗಿ ಚಿಕನ್ ಬಿರಿಯಾನಿಯ ಬದಲಿಗೆ ಬೀಫ್ ಬಿರಿಯಾನಿ ನೀಡಲಾಗುವುದು ಎಂದು ಹೇಳಲಾಗಿದೆ. ನೋಟಿಸ್ ವೈರಲ್​ ಆಗುತ್ತಿದ್ದಂತೆ ವಿಶ್ವವಿದ್ಯಾಲಯದಲ್ಲಿ ವಿವಾದ ಹುಟ್ಟಿಕೊಂಡಿತು. ಆದರೆ ನಂತರ ಎಎಂಯು ಆಡಳಿತ ಮಂಡಳಿಯು ನೋಟಿಸ್‌ನಲ್ಲಿ ಟೈಪಿಂಗ್ ದೋಷವಿದೆ ಎಂದು ಸ್ಪಷ್ಟಪಡಿಸಿತು. ಜವಾಬ್ದಾರಿಯುತ ವ್ಯಕ್ತಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಭರವಸೆ ನೀಡಲಾಗಿದೆ.

ಎಎಂಯು ಸಾರ್ವಜನಿಕ ಸಂಪರ್ಕ ವಿಭಾಗದ ಸದಸ್ಯೆ ಪ್ರೊಫೆಸರ್ ವಿಭಾ ಶರ್ಮಾ ಮಾತನಾಡಿ, ಈ ವಿಷಯವನ್ನು ನಮ್ಮ ಗಮನಕ್ಕೆ ತರಲಾಯಿತು ಮತ್ತು ಊಟದ ಮೆನು ಕುರಿತು ನೋಟಿಸ್ ನೀಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇದು ಸ್ಪಷ್ಟವಾಗಿ ಟೈಪಿಂಗ್ ದೋಷವಾಗಿದ್ದರೂ ಸಹ ನೋಟಿಸ್‌ನಲ್ಲಿ ಯಾವುದೇ ಅಧಿಕೃತ ಸಹಿ ಇಲ್ಲದ ಕಾರಣ ಅದರ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದರಿಂದ ಅದನ್ನು ತಕ್ಷಣವೇ ಹಿಂಪಡೆಯಲಾಯಿತು ಎಂದು ಹೇಳಿದರು.

ಆಡಳಿತವು ಜವಾಬ್ದಾರಿಯುತ ಇಬ್ಬರು ಹಿರಿಯ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ವಿಶ್ವವಿದ್ಯಾಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net