Bijapur Encounter | ಎನ್​ಕೌಂಟರ್​ನಲ್ಲಿ 31 ನಕ್ಸಲರ ಹತ್ಯೆ; ಇಬ್ಬರು ಸೈನಿಕರು ಹುತಾತ್ಮ

Untitled design - 2025-02-09T144102.818
Published on

ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರ(Bijapur Encounter) ಜಿಲ್ಲೆಯಲ್ಲಿ ಭಾನುವಾರ(ಫೆಬ್ರವರಿ 9) ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 31 ನಕ್ಸಲರು ಮೃತಪಟ್ಟಿದ್ದಾರೆ. ಕಾರ್ಯಾಚರಣೆ ಸಮಯದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್​ಕೌಂಟರ್ ಸಮಯದಲ್ಲಿ ಮತ್ತಿಬ್ಬರು ಸೈನಿಕರಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ 12 ಮಾವೋವಾದಿಗಳ ಸಾವು ಸಂಭವಿಸಿದ್ದರೂ ನಂತರ ಮೃತರ ಸಂಖ್ಯೆ 31ಕ್ಕೆ ಏರಿದೆ ಎಂದು ಐಜಿ ಬಸ್ತಾರ್ ಪಿ ಸುಂದರರಾಜ್ ದೃಢಪಡಿಸಿದರು.

ಬಿಜಾಪುರ ಮತ್ತು ನಾರಾಯಣಪುರಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರ ಗಡಿಯಲ್ಲಿರುವ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಕಾಡಿನಲ್ಲಿ ಭಾನುವಾರ ಬೆಳಗ್ಗೆ ಭದ್ರತಾ ಸಿಬ್ಬಂದಿಯ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿದ್ದಾಗ ಎನ್‌ಕೌಂಟರ್ ಪ್ರಾರಂಭವಾಯಿತು ಎಂದು ಐಜಿ ಪಿ ಸುಂದರರಾಜ್ ತಿಳಿಸಿದ್ದಾರೆ. ಬಸ್ತಾರ್ ಪೊಲೀಸರು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎನ್‌ಕೌಂಟರ್ ಸ್ಥಳದಿಂದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ನಕ್ಸಲರ ವಿರುದ್ಧ ನಿರಂತರವಾಗಿ ಕ್ರಮಕೈಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.

ಬಿಜಾಪುರದ ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ), ವಿಶೇಷ ಕಾರ್ಯಪಡೆ(ಎಸ್‌ಟಿಎಫ್), ಸಿ -60 ಸಿಬ್ಬಂದಿ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಿಜಾಪುರದಲ್ಲಿಯೇ 2025 ಫೆಬ್ರವರಿ 1ರಂದು ಗಂಗಲೂರು ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆಯಿತು. ಇದರಲ್ಲಿ 8 ನಕ್ಸಲರು ಸಾವನ್ನಪ್ಪಿದರು ಎಂದು ಅವರು ಹೇಳಿದರು. ಕಳೆದ ತಿಂಗಳು ಜನವರಿ 20-21 ರಂದು, ಛತ್ತೀಸ್‌ಗಢ ಮತ್ತು ಒಡಿಶಾದ ಗಡಿಯಲ್ಲಿರುವ ಗರಿಯಾಬಂದ್ ಜಿಲ್ಲೆಯ ಅರಣ್ಯಗಳಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 16 ನಕ್ಸಲರು ಸಾವನ್ನಪ್ಪಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net