ಚೀನಾ ಪ್ರಾಯೋಜಕತ್ವ ತ್ಯಜಿಸದ ಬಿಸಿಸಿಐ ವಿರುದ್ಧ ಆಕ್ರೋಶ

ipl 2020 vivo
Published on

ನವದೆಹಲಿ: ಚೀನಾ ಜತೆಗಿನ ಗಡಿ ಗಲಾಟೆ ಭುಗಿಲೆದ್ದ ಸಮಯದಲ್ಲಿ ಬಿಸಿಸಿಐ, ಚೀನಾ ಕಂಪನಿಗಳ ಪ್ರಾಯೋಜಕತ್ವವನ್ನು ತ್ಯಜಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿತ್ತು. ಆದರೆ ಬಳಿಕ ಈ ಬಗೆಗಿನ ಸಭೆಯನ್ನು ಮುಂದೂಡುತ್ತಲೇ ಬಂದಿತ್ತು. ಇದೀಗ ಐಪಿಎಲ್ 13ನೇ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸಲು ಮುಂದಾಗಿರುವ ನಡುವೆ, ಎಲ್ಲ ಪ್ರಾಯೋಜಕತ್ವ ಒಪ್ಪಂದಗಳನ್ನೂ ಹಾಗೆಯೇ ಮುಂದುವರಿಸುವುದಾಗಿ ಹೇಳಿದೆ. ಇದು ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಚೀನಾಗೆ ಚಾಟಿ ಏಟು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೆ ಡ್ರಾೃಗನ್ ನಾಡಿನ ನೂರಾರು ಆ್ಯಪ್‌ಗಳನ್ನು ಬಹಿಷ್ಕರಿಸಿದೆ. ಇದರೊಂದಿಗೆ ಬಿಸಿಸಿಐ ಕೂಡ ಚೀನಾ ಕಂಪನಿಗಳ ಪ್ರಾಯೋಜಕತ್ವ ತ್ಯಜಿಸಿದ್ದರೆ ಇನ್ನಷ್ಟು ಪೆಟ್ಟು ನೀಡಿದಂತಾಗುತ್ತಿತ್ತು. ಆದರೆ ಬಿಸಿಸಿಐ, ಚೀನಾ ಕಂಪನಿಗಳನ್ನು ತ್ಯಜಿಸಿಲ್ಲ. ಇದರಿಂದ ಸಂಘ ಪರಿವಾರದ ಸ್ವದೇಶಿ ಜಾಗರಣ್ ಮಂಚ್ (ಎಸ್‌ಜೆಎಂ) ಕೂಡ ಬಿಸಿಸಿಐ ಚೀನಾ ಪ್ರಾಯೋಜಕತ್ವ ತ್ಯಜಿಸಬೇಕು ಎಂದು ಆಗ್ರಹಿಸಿದೆ. ಚೀನಾ ಉತ್ಪನ್ನಗಳನ್ನು ತ್ಯಜಿಸಲು ಜನರಿಗೆ ಕರೆ ನೀಡಿರುವ ಸಮಯದಲ್ಲಿ ಚೀನಾ ಪ್ರಾಯೋಜಕತ್ವ ಯಾಕೆ ಎಂದು ಎಸ್‌ಜೆಎಂ ರಾಷ್ಟ್ರೀಯ ಸಹ-ಸಂಚಾಲಕ ಅಶ್ವಿನಿ ಮಹಾರಾಜ್ ಪ್ರಶ್ನಿಸಿದ್ದಾರೆ.

‘ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬುದು ಈಗ ಎಸ್‌ಜೆಎಂನ ಬೇಡಿಕೆ ಮಾತ್ರ ಆಗಿ ಉಳಿದಿಲ್ಲ. ಇದು ಈಗ ಸಾಮಾನ್ಯ ಪ್ರಜೆಯ ಬೇಡಿಕೆಯೂ ಆಗಿದೆ. ಇಡೀ ಜಗತ್ತೇ ಚೀನಾವನ್ನು ಬಹಿಷ್ಕರಿಸುತ್ತಿದೆ. ಆದರೆ ಐಪಿಎಲ್ ಅದಕ್ಕೆ ಆಶ್ರಯ ನೀಡುತ್ತಿದೆ. ಕ್ರಿಕೆಟ್ ಸಹಿತ ದೇಶಕ್ಕಿಂತ ಯಾವುದು ಕೂಡ ದೊಡ್ಡದಲ್ಲ ಎಂಬುದನ್ನು ಬಿಸಿಸಿಐ ಅರ್ಥಮಾಡಿಕೊಳ್ಳಬೇಕು’ ಎಂದು ಅಶ್ವಿನಿ ಮಹಾರಾಜ್ ಹೇಳಿದ್ದಾರೆ.

ಅಮಿತ್ ಷಾಗೆ ಸಿಎಐಟಿ ಪತ್ರ

ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ಚೀನಾದ ವಿವೋ ಕಂಪನಿಯನ್ನು ಕೈಬಿಡದಿರುವ ಬಗ್ಗೆ ಅಖಿಲ ಭಾರತ ಟ್ರೇಡರ್ಸ್‌ ಕಾನ್ಫೆಡರೇಷನ್ (ಸಿಎಐಟಿ) ಗೃಹ ಸಚಿವ ಅಮಿತ್ ಷಾ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರವನ್ನೂ ಬರೆದಿದೆ. ಚೀನಾ ಜತೆಗಿನ ಗಡಿ ಗಲಾಟೆಯ ಬಳಿಕ ಪ್ರಧಾನಿ ಮೋದಿ ಅವರು, ‘ವೋಕಲ್ ಫಾರ್ ಲೋಕಲ್’ ಮತ್ತು ‘ಆತ್ಮನಿರ್ಭರ್ ಭಾರತ್’ ಕರೆ ನೀಡಿದ್ದರು. ಆದರೆ ಬಿಸಿಸಿಐ ಈಗ ಕೇಂದ್ರ ಸರ್ಕಾರದ ನೀತಿನಿಯಮಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ’ ಎಂದು ಸಿಎಐಟಿ ಟೀಕಿಸಿದೆ. ಚೀನಾದ ಮೊಬೈಲ್ ಕಂಪನಿ ವಿವೋ, ಐಪಿಎಲ್‌ಗೆ ವಾರ್ಷಿಕ 440 ಕೋಟಿ ರೂ. ಮೊತ್ತಕ್ಕೆ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿದೆ. ಕೊನೇಕ್ಷಣದಲ್ಲಿ ಬೇರೆ ಪ್ರಾಯೋಜಕರನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ತನ್ನ ನಿರ್ಧಾರಕ್ಕೆ ಈಗಾಗಲೆ ಸಮಜಾಯಿಷಿ ನೀಡಿದೆ.

ವಿರೋಧ ಪಕ್ಷಗಳಿಂದ ಬಿಜೆಪಿ ವಿರುದ್ಧ ಟೀಕೆ

ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕೂಡ ಐಪಿಎಲ್‌ಗೆ ಚೀನಾ ಪ್ರಾಯೋಜಕತ್ವ ಮುಂದುವರಿಸಿರುವುದನ್ನು ಟೀಕಿಸಿದ್ದಾರೆ. ‘ಚೀನಾ ಉತ್ಪನ್ನಗಳನ್ನು ಖರೀದಿಸದಂತೆ ಜನರಿಗೆ ಸರ್ಕಾರ ಹೇಳುತ್ತಿದೆ. ಆದರೆ ಐಪಿಎಲ್‌ಗೆ ಶೀರ್ಷಿಕೆ ಪ್ರಾಯೋಜಕನಾಗಿ ಚೀನಾದ ಮೊಬೈಲ್ ಕಂಪನಿ ಮುಂದುವರಿದಿದೆ. ಚೀನಾ ಹಣ, ಹೂಡಿಕೆ, ಪ್ರಾಯೋಜಕತ್ವ ಮತ್ತು ಜಾಹೀರಾತುಗಳನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯದೆ ನಾವು ಗೊಂದಲದಲ್ಲಿದ್ದೇವೆ’ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಟ್ವೀಟಿಸಿದ್ದಾರೆ. ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲಾ ಕೂಡ, ‘ಕ್ರಿಕೆಟ್ ಮರಳುತ್ತಿದೆ. ಚೀನಾ ಲಾಭ ಮಾಡಕೊಳ್ಳುತ್ತಿದೆ. ಇದುವೇ ದ್ವಂದ್ವ ನೀತಿ. ಬಿಜೆಪಿ ಬಣ್ಣ ಬಯಲಾಗಿದೆ’ ಎಂದು ಟೀಕಿಸಿದ್ದಾರೆ. ಗೃಹ ಸಚಿವ ಅಮಿತ್ ಷಾ ಅವರ ಪುತ್ರ ಜಯ್ ಷಾ ಬಿಸಿಸಿಐಗೆ ಕಾರ್ಯದರ್ಶಿಯಾಗಿರುವುದು ಕೂಡ ವಿರೋಧ ಪಕ್ಷಗಳು ಖಾರವಾಗಿ ಪ್ರತಿಕ್ರಿಯಿಸಲು ಪ್ರಮುಖ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net