ನವದೆಹಲಿ: ಐಪಿಎಲ್ 13ನೇ ಆವೃತ್ತಿಯನ್ನು ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಆಯೋಜಿಸುವ ಬಿಸಿಸಿಐ ಯೋಜನೆಗೆ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ. ಇದರಿಂದ ಆರು ವರ್ಷಗಳ ಬಳಿಕ ಮತ್ತೊಮ್ಮೆ ಅರಬ್ ರಾಷ್ಟ್ರದಲ್ಲಿ ಟಿ20 ಹಬ್ಬ ನಡೆಯಲಿರುವುದು ಅಧಿಕೃತವಾಗಿದೆ.
ಭಾನುವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದರನ್ವಯ ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 8ರ ಬದಲಾಗಿ 10ರಂದು ನಡೆಯಲಿದೆ. ಪ್ರತಿ ತಂಡಕ್ಕೆ ಯುಎಇಗೆ ತಲಾ 24 ಆಟಗಾರರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ. ಟೂರ್ನಿಯಲ್ಲಿ ಒಟ್ಟು 10 ಡಬಲ್ ಹೆಡರ್ಗಳು (ಒಂದೇ ದಿನ 2 ಪಂದ್ಯಗಳು) ಇರಲಿವೆ.
ಇದನ್ನೂ ಓದಿ: ನವೆಂಬರ್ 1ರಿಂದ 10ರವರೆಗೆ ಮಹಿಳೆಯರ ಐಪಿಎಲ್
ಇನ್ನು ಐಪಿಎಲ್ ಪಂದ್ಯಗಳು ರಾತ್ರಿ 8 ಗಂಟೆಗೆ ಬದಲಾಗಿ ರಾತ್ರಿ 7.30ಕ್ಕೆ ಆರಂಭಗೊಳ್ಳಲಿರುವುದನ್ನು ಐಪಿಎಲ್ ಆಡಳಿತ ಮಂಡಳಿ ಖಚಿತಪಡಿಸಿದೆ. ಇದೇ ವೇಳೆ ಟೂರ್ನಿಯ ಶೀರ್ಷಿಕೆ ಪ್ರಾಯೋಜಕನಾಗಿ ಚೀನಾ ಮೂಲದ ವಿವೋ ಮೊಬೈಲ್ ಕಂಪನಿ ಜತೆಗಿನ ಒಪ್ಪಂದವನ್ನು ಮುಂದುವರಿಸಲು ಕೂಡ ನಿರ್ಧರಿಸಲಾಗಿದೆ.