

ಬೆಂಗಳೂರು: ಬಿಬಿಎಂಪಿಯಲ್ಲಿ ಖಾಲಿ ಉಳಿದಿರುವ ವಿವಿಧ ವೃಂದದ ಒಟ್ಟು 6,414 ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ಉಳಿದ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ ಹೆಚ್ಚಿನ ಒತ್ತಡದಲ್ಲಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಹಂತದಲ್ಲಿ ಸಿಗಬೇಕಿದ್ದ ಮುಂಬಡ್ತಿ ಪಡೆಯಲು ವಿಳಂಬವಾಗಿ ಅಧಿಕಾರಿಗಳು ನಿವೃತ್ತಿ ಹೊಂದುತ್ತಿದ್ದಾರೆ. ಇದರಿಂದಾಗಿ ನ್ಯಾಯಯುತವಾಗಿ ದೊರಯಬೇಕಿದ್ದ ಆಡಳಿತ ಸೌಲಭ್ಯಗಳಿಂದ ಸಾಕಷ್ಟು ಅಧಿಕಾರಿಗಳು ವಂಚಿತರಾಗುತ್ತಿದ್ದಾರೆ.
ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಭೈರತಿ ಸುರೇಶ್, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ, ಬಿ.ಝಡ್.ಜಮೀರ್ ಅಹ್ಮದ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸಂಘ ಪತ್ರ ಬರೆದಿದೆ.
ಪಾಲಿಕೆಯಲ್ಲಿ ಒಟ್ಟು 12,945 ವಿವಿಧ ವೃಂದದ ಹುದ್ದೆಗಳು ಮಂಜೂರಾದ ಪೈಕಿ 6,532 ಅಧಿಕಾರಿ ಮತ್ತು ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಖಾಲಿ ಉಳಿದಿರುವ 6,414 ಹುದ್ದೆಗಳನ್ನು ಭರ್ತಿ ಮಾಡಿಲ್ಲ. 1976ರ ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ಪಾಲಿಕೆಯ ಮುಖ್ಯ ಆಯುಕ್ತರಿಗೆ ‘ಎ’ ಶ್ರೇಣಿಯ ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಅಧಿಕಾರವಿತ್ತು. ಆದರೆ, 2020ರ ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ‘ಎ’ ಶ್ರೇಣಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಲು ಮತ್ತು ಆಡಳಿತ ಸೌಲಭ್ಯ ಪಡೆಯಲು ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಇದರಿಂದಾಗಿ ಸರ್ಕಾರಿ ಹಂತದಲ್ಲಿ ಇವರಿಗೆ ಮುಂಬಡ್ತಿ ಪಡೆಯಲು ವಿಳಂಬವಾಗುತ್ತಿದೆ. ಹೀಗಾಗಿ, ಈ ಸಮಸ್ಯೆಯನ್ನು ಹೋಗಲಾಡಿಸಲು ಪಾಲಿಕೆ ಮುಖ್ಯ ಆಯುಕ್ತರಿಗೆ ಮುಂಬಡ್ತಿ ನೀಡುವ ಅಧಿಕಾರವನ್ನು ಪ್ರತ್ಯೋಜಿಸಬೇಕು ಎಂದು ಪತ್ರದಲ್ಲಿ ಸಂಘ ಉಲ್ಲೇಖಿಸಿದೆ.