ಬೆಂಗಳೂರು: ವಿಧಾನಸಭಾ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗಿ ಒಂದು ತಿಂಗಳು ಕೂಡ ಮುಗಿದಿಲ್ಲ. ಅಷ್ಟರಲ್ಲಾಗಲೇ ಇನ್ನೊಂದು ಚುನಾವಣೆ ಬರುವ ಸಾಧ್ಯತೆ ನಿಚ್ಚಳವಾಗಿದೆ. ಈ ಕುರಿತು ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರನ್ನು ಒಳಗೊಂಡಂತೆ ಇಂದು ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದು, ಮಹತ್ವದ ಚರ್ಚೆಗಳಾಗಿವೆ. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿಯ ಇಂದಿರಾಗಾಂಧಿ ಭವನದಲ್ಲಿ ನಡೆದ ಈ ಸಭೆ ಇದೀಗ ತಾನೇ ಮುಗಿದಿದೆ.
ಸಚಿವ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಸಂಸದ ಡಿ.ಕೆ.ಸುರೇಶ್, ಎನ್.ಎ.ಹ್ಯಾರಿಸ್, ಎ.ಸಿ.ಶ್ರೀನಿವಾಸ್, ಜಮೀರ್ ಅಹ್ಮದ್, ಪಿ.ಆರ್ ರಮೇಶ್, ಸಲೀಂ ಅಹ್ಮದ್, ಯು.ಬಿ.ವೆಂಕಟೇಶ್ ಸೇರಿದಂತೆ ಕಾಂಗ್ರೆಸ್ನ ಹಲವಾರು ನಾಯಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಮತ್ತೊಂದೆಡೆ ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಎಂ ಕೃಷ್ಣಪ್ಪ, ಪ್ರಿಯಾಕೃಷ್ಣ, ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್ ಸಭೆಗೆ ಗೈರಾಗಿದ್ದರು.
ಸಭೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ನಮ್ಮ ಪಕ್ಷದ ನಾಯಕರ ಸಭೆ ಆಗಿದೆ. ಇದರಲ್ಲಿ ಬಿಬಿಎಂಪಿ ಚುನಾವಣೆಯ ಬಗ್ಗೆ ಸಭೆ ನಡೆಸಲಾಗಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ಆಗಬಹುದು ಎಂದೂ ಹೇಳಿದ್ದಾರೆ. ಆದರೆ ಬಿಬಿಎಂಪಿ ವಿಂಗಡಣೆ ಬಗ್ಗೆ ಚಿಂತನೆ ಇಲ್ಲ, ಒತ್ತುವರಿ ವಿಚಾರದ ಬಗ್ಗೆ ಚರ್ಚೆಯಾಗಿಲ್ಲ ಎಂಬ ಮಾಹಿತಿಯನ್ನೂ ಅವರು ಹಂಚಿಕೊಂಡರು.
ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ