BBKS10: ಬಿಗ್ ಬಾಸ್​ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮನೆಯ ಸದಸ್ಯರು! ಕಾರಣ ಹೀಗಿದೆ

ವಿಜಯವಾಣಿ (28)
Published on

ಬೆಂಗಳೂರು: ಕಳೆದ ವಾರದ ಕೋಲಾಹಲಗಳು, ಜಗಳಗಳು, ಟಾಸ್ಕ್‌ ಎಂಬುದು ವಿಕೋಪಕ್ಕೆ ತಿರುಗಿಕೊಂಡ ವಿಪರ್ಯಾಸಗಳು, ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ತೆಗೆದುಕೊಂಡ ಕ್ಲಾಸ್ ಎಲ್ಲವೂ ಮುಗಿದು ಬಿಗ್‌ಬಾಸ್‌ ಮನೆ ಈಗ 11ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಮೊದಲ ದಿನವೇ ಮನೆಯ ಸದಸ್ಯರೆಲ್ಲರೂ ಒಂದೊಂದು ಘಟನೆ ನೆನೆದು, ಕಂಬನಿ ಮಿಡಿದಿರುವುದು ವೀಕ್ಷಕರಲ್ಲಿ ಭಾರೀ ಗೊಂದಲ ಮೂಡಿಸಿದೆ.

ಹೊಸ ವಾರದ ಮೊದಲ ದಿನ ಭಾವಪೂರ್ಣವಾಗಿತ್ತು. ಮನೆಯ ಸದಸ್ಯರೆಲ್ಲರೂ ಈ ಭಾವದ ಮಳೆಯಲ್ಲಿ ಭರಪೂರ ನೆನೆದಿದ್ದಾರೆ. ಇಂಥದ್ದೊಂದು ಎಮೋಷನಲ್‌ ಓಪನ್‌ಅಪ್‌ ಆಗುವ ಅವಕಾಶವನ್ನು ಕಲ್ಪಿಸಿದ್ದು ಬಿಗ್‌ಬಾಸ್‌. ಬಿಗ್‌ಬಾಸ್‌ ಮನೆಯ ಪ್ರತಿ ಸದಸ್ಯರನ್ನು ಕನ್ಫೆಷನ್‌ ರೂಮಿಗೆ ಕರೆದು ಅವರ ಮನದಾಳದ ಮಾತುಗಳಿಗೆ ಕಿವಿಯಾಗಿದ್ದಾರೆ.

ಒಂಟಿಯಾಗಿ ಕನ್‌ಪೆಷನ್‌ ರೂಮಿನಲ್ಲಿ ಕೂತ ಸ್ಪರ್ಧಿಗಳು ತಮ್ಮ ಮನಸಲ್ಲಿ ಮುಚ್ಚಿಕೊಂಡಿದ್ದ ಹಲವು ಸಂಗತಿಗಳನ್ನು, ಕಾಡುವ ವಿಷಯಗಳನ್ನು, ಗಾಯದ ನೋವುಗಳನ್ನು ಮನಬಿಚ್ಚಿ ಮಾತಾಡಿದ್ದಾರೆ. ಹೊರಜಗತ್ತಿಗೆ ಇದುವರೆಗೆ ಒರಟು, ಸಂಚುಕೋರರು, ಅವಕಾಶವಾದಿ, ಚೇಲಾ, ಡಾಮಿನೆಂಟ್, ಉದ್ಧಟ, ನೆಗೆಟೀವ್, ಕುತಂತ್ರಿ, ಮಾತುಗಾರರು ಹೀಗೆ ಹತ್ತು ಹಲವು ಲೇಬಲ್‌ಗಳನ್ನು ಮನೆಯ ಉಳಿದ ಸದಸ್ಯರಿಂದಲೇ ಪಡೆದುಕೊಂಡು ಓಡಾಡುತ್ತಿದ್ದ ಸ್ಪರ್ಧಿಗಳು, ತಮ್ಮ ಎಲ್ಲ ಲೇಬಲ್‌ಗಳನ್ನೂ ಮರೆತು ಬಿಗ್‌ಬಾಸ್ ಜತೆಗೆ ಭಾವುಕವಾಗಿ ಮಾತಾಡಿದ್ದಾರೆ.

ಇದರಿಂದ ಅವರ ವ್ಯಕ್ತಿತ್ವದ ಭಿನ್ನ ಮಗ್ಗಲುಗಳು ತೆರೆದುಕೊಂಡಿವೆ. ಅವು ಹೃದಯಸ್ಪರ್ಶಿಯೂ, ಮನಕರಗುವಂತೆಯೂ ಇದೆ. ಒಟ್ಟಾರೆ ಈ ವಾರದ ಆರಂಭ ಭಾವಪೂರ್ಣವಾಗಿದೆ. ಮನದೊಳಗೆ ಬಚ್ಚಿಟ್ಟುಕೊಂಡಿದ್ದ ಹಲವು ನೋವುಗಳನ್ನು, ಅವಮಾನ, ಹಿಂಜರಿಕೆಗಳನ್ನು ಹಂಚಿಕೊಂಡಿರುವ ಸದಸ್ಯರು ಹಗುರಾಗಿದ್ದಾರೆ. ನೋವನ್ನು ಹಂಚಿಕೊಂಡ ಮನುಷ್ಯ ಹೊಸತಾಗುತ್ತಾನಂತೆ. ಹಾಗಾದರೆ ಈ ವಾರದ ಬಿಗ್‌ಬಾಸ್‌ನಲ್ಲಿ ಹೊಸದೊಂದು ಪ್ರಭೆ ಕಾಣಿಸಿಕೊಳ್ಳಲಿದೆಯಾ? ಹೊಸ ಉತ್ಸಾಹದೊಂದಿಗೆ, ಹೊಸ ಹೊಸ ಕ್ರಿಯೇಟಿವ್‌ ಯೋಚನೆಗಳೊಂದಿಗೆ ಸದಸ್ಯರು ಆಡಲಿದ್ದಾರಾ?

ಈ ನಿರೀಕ್ಷೆಯಂತೂ ಎಲ್ಲರಲ್ಲೂ ಇದ್ದೇ ಇದೆ. ಅದು ನಿಜವಾಗುತ್ತದಾ ಎಂಬುದನ್ನು ಬಿಗ್‌ಬಾಸ್ ಮನೆಯ ಸದಸ್ಯರ ನಡವಳಿಕೆಯೇ ನಿರ್ಧರಿಸುತ್ತದೆ. ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net