

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಹಿಂದಿ ಸಿನಿಮಾ ಡಂಕಿ ಇದೀಗ ಬಿಡುಗಡೆಗೆ ದಿನಗಣನೆ ಎಣಿಸುತ್ತಿದ್ದು, ಡಿ. 21 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆಯಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಥಿಯೇಟರ್ಗಳಲ್ಲಿ ಚಿತ್ರಕ್ಕೆ ಕೊಡಲಾಗುವ ನಾಲ್ಕು ಆಟಗಳನ್ನು ಮೀರಿ ಹೆಚ್ಚುವರಿ ಶೋ ಏರ್ಪಡಿಸಲು ಇದೀಗ ಚಿತ್ರತಂಡ ಮುಂದಾಗಿರುವುದು ಸದ್ಯ ಕಿಂಗ್ ಖಾನ್ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.
ಜವಾನ್ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ಬಂದ ಬೆನ್ನಲ್ಲೇ ಶಾರುಖ್ ಅವರ ಮುಂದಿನ ಸಿನಿಮಾ ಡಂಕಿಗೆ ಭಾರೀ ನಿರೀಕ್ಷೆಗಳು ಹೆಚ್ಚಿದ್ದು, ಕಿಂಗ್ ಖಾನ್ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳು ಸೇರಿದಂತೆ ಬಿಡುಗಡೆ ಕೆಲಸಗಳಲ್ಲಿ ನಿರತರಾಗಿರುವ ಚಿತ್ರದ ತಯಾರಕರು, ಸಿನಿಪ್ರೇಕ್ಷಕರಿಗೆ ಹೆಚ್ಚುವರಿ ಶೋ ಏರ್ಪಡಿಸಲು ಸಜ್ಜಾಗಿದ್ದಾರೆ. ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿದ ಈ ಚಿತ್ರಕ್ಕೆ ಬೆಳಗ್ಗೆ 6 ಗಂಟೆಯ ವಿಶೇಷ ಪ್ರದರ್ಶನ ಇಡಲು ಸಕಲ ತಯಾರಿಗಳು ನಡೆಯುತ್ತಿವೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವದಂತಿಗಳು ಹರಿದಾಡುತ್ತಿದ್ದು, ರಣಬೀರ್ ಕಪೂರ್ ನಟನೆಯ ಅನಿಮಲ್ ಚಿತ್ರಕ್ಕೆ ಬೆಳಗ್ಗೆ 6 ಗಂಟೆ ಶೋ ಕೊಟ್ಟಂತೆ ಡಂಕಿ ಸಿನಿಮಾಗೂ ಇರಲಿದೆ ಎಂಬ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದ್ರೆ, ಈ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಘೋಷಣೆಯಾಗಿಲ್ಲ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
ಚಿತ್ರದಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್, ಅನಿಲ್ ಗ್ರೋವರ್, ಬೊಮನ್ ಇರಾನಿ ಮುಂತಾದವರ ತಾರಾಗಣವಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್ ಅಡಿಯಲ್ಲಿ ಗೌರಿ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಡಂಕಿಯನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಪ್ರೀತಮ್ ಅವರ ಸಂಗೀತವಿದೆ,(ಏಜೆನ್ಸೀಸ್).