

ತಮಿಳುನಾಡು: ಮೈಚಾಂಗ್ ಚಂಡಮಾರುತದ ತೀವ್ರತೆಗೆ ತತ್ತರಿಸಿದ ತಮಿಳುನಾಡು ಜಿಲ್ಲೆಯ ಹಲವು ಪ್ರದೇಶಗಳು, ಭಾರೀ ಮಳೆಯಿಂದ ಉಂಟಾದ ಹಾನಿಗೆ ಸಂಪೂರ್ಣವಾಗಿ ನಲುಗಿದೆ. ಇದೆಲ್ಲದರ ಮಧ್ಯೆ ಇದೀಗ ತಮಿಳುನಾಡಿನ ಸರ್ಕಾರವು ನಾಲ್ಕು ಜಿಲ್ಲೆಗಳ ಶಾಲೆಗಳಲ್ಲಿ ಸ್ವಚ್ಛತಾ ಅಭಿಯಾನಕ್ಕಾಗಿ 1.90 ಕೋಟಿ ರೂ. ಹಣವನ್ನು ನೆರವಾಗಿ ಘೋಷಿಸಿದೆ.
ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ಮತ್ತು ತಿರುವಳ್ಳೂರ್ ಜಿಲ್ಲೆಗಳಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಶೈಕ್ಷಣಿಕ ಸೌಲಭ್ಯಗಳನ್ನು ಮರುಸ್ಥಾಪಿಸುವ ಉದ್ದೇಶದಿಂದ ಈ ಹಣವನ್ನು ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಚಂಡಮಾರುತದ ವಾತಾವರಣದಲ್ಲಿ ಚೆನ್ನೈ ನಗರ ತೀವ್ರ ಜಲಾವೃತಕ್ಕೆ ಸಿಲುಕಿತು. ಮಳೆಯ ತೀವ್ರತೆ ಅಗತ್ಯ ಸೇವೆಗಳಿಗೆ ಅಡ್ಡಿಪಡಿಸಿದ ಕಾರಣ, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು.
ನಿರಂತರವಾಗಿ ಸುರಿದ ಮಳೆಯಿಂದ ನೀರಿನ ಮಟ್ಟ ಜಾಸ್ತಿಯಾಗಿ, ತಗ್ಗು ಪ್ರದೇಶಗಳಲ್ಲಿನ ಶಾಲೆಗಳ ಒಳಗೆ ಪ್ರವೇಶಿಸಿತು. ಇದರಿಂದ ಶಾಲೆಯ ಕಟ್ಟಡ ಸೇರಿದಂತೆ ಇತರೆ ಉಪಕರಣಗಳು ಹಾನಿಗೊಳಗಾಗಿವೆ.
ಇನ್ನು ಈ ಕುರಿತಂತೆ ಮಾತನಾಡಿದ ಆರೋಗ್ಯ ಸಚಿವ ಮಾ. ಸುಬ್ರಮಣಿಯನ್, "ಪೀಡಿತ ಜಿಲ್ಲೆಗಳಲ್ಲಿ 800ಕ್ಕೂ ಹೆಚ್ಚು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ. ಏಳು ಖಾಸಗಿ ಆಸ್ಪತ್ರೆಗಳೊಂದಿಗೆ ಸಹಯೋಗ ಹೊಂದಿದ್ದೇವೆ, ಸೈದಾಪೇಟ್‌ನ ಅಡೆಯಾರ್ ನದಿಯ ದಡದಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದೇವೆ. ಅಗತ್ಯಬಿದ್ದಲ್ಲಿ ಚೆನ್ನೈನ ಇತರ ಸ್ಥಳಗಳಿಗೂ ವಿಸ್ತರಿಸುತ್ತೇವೆ" ಎಂದರು.
ಸದ್ಯ ಪ್ರವಾಹದ ಪರಿಸ್ಥಿತಿಯಲ್ಲಿ ಸಿಲುಕಿದ ಸಂತ್ರಸ್ತರಿಗೆ ಒಂದು ವಾರದೊಳಗೆ 6,000 ರೂಪಾಯಿ ಆರ್ಥಿಕ ನೆರವು ಸೇರಿದಂತೆ ಪರಿಹಾರ ಕ್ರಮಗಳನ್ನು ವಿತರಿಸಲಾಗುವುದು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ,(ಏಜೆನ್ಸೀಸ್).