

ನವದೆಹಲಿ: ಭಾರತದಲ್ಲಿ ಇರಲು ಅವಕಾಶ ನೀಡುವಂತೆ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್(Taslima Nasreen) ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಸೋಮವಾರ (ಅಕ್ಟೋಬರ್ 21) ಮನವಿ ಮಾಡಿದ್ದಾರೆ.
ನಾನು ಈ ಮಹಾನ್ ದೇಶವನ್ನು ಪ್ರೀತಿಸುವ ಕಾರಣ ಭಾರತದಲ್ಲಿ ಕಳೆದ 20 ವರ್ಷಗಳಿಂದ ವಾಸಿಸುತ್ತಿದ್ದೇನೆ. ಆದರೆ ಗೃಹ ಸಚಿವಾಲಯವು ಜುಲೈ 22ರಿಂದ ನನ್ನ ನಿವಾಸದ ಪರವಾನಗಿಯನ್ನು ವಿಸ್ತರಿಸುತ್ತಿಲ್ಲ. ನಾನು ತುಂಬಾ ಚಿಂತಿತಳಾಗಿದ್ದೇನೆ. ನೀವು ನನಗೆ ಉಳಿಯಲು ಅವಕಾಶ ನೀಡಿದರೆ ನಾನು ನಿಮಗೆ ತುಂಬಾ ಕೃತಜ್ಞಳಾಗಿರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ಬರೆದಿದ್ದಾರೆ. ಮತ್ತು ಈ ಪೋಸ್ಟ್ ಅನ್ನು ಕೇಂದ್ರ ಗೃಹ ಸಚಿವರಿಗೆ ಟ್ಯಾಗ್ ಮಾಡಿದ್ದಾರೆ.
ಕೋಮುವಾದದ ಕಟು ಟೀಕಾಕಾರರಾದ ತಸ್ಲೀಮಾ ನಸ್ರೀನ್ ಅವರು 1994 ರಿಂದ ದೇಶಭ್ರಷ್ಟರಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಕೋಮುವಾದ ಮತ್ತು ಮಹಿಳಾ ಸಮಾನತೆಯ ಕುರಿತಾದ ಅವರ ಬರಹಗಳಿಗಾಗಿ ಇಸ್ಲಾಮಿ ಮೂಲಭೂತವಾದಿಗಳಿಂದ ಟೀಕೆಗಳನ್ನು ಎದುರಿಸಿದ ನಂತರ ಅವರು ಬಾಂಗ್ಲಾದೇಶವನ್ನು ತೊರೆಯಬೇಕಾಯಿತು.
1994ರಲ್ಲಿ ಪ್ರಕಟವಾದ ತಸ್ಲೀಮಾ ನಸ್ರೀನ್ ಅವರ ಕಾದಂಬರಿ ‘ಲಜ್ಜಾ’ ಜಗತ್ತಿನಾದ್ಯಂತ ಸಾಹಿತ್ಯ ಲೋಕದ ಗಮನ ಸೆಳೆದಿತ್ತು. ಡಿಸೆಂಬರ್ 1992ರಲ್ಲಿ ಭಾರತದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಬಂಗಾಳಿ ಹಿಂದೂಗಳ ವಿರುದ್ಧ ಹಿಂಸಾಚಾರ, ಅತ್ಯಾಚಾರ, ಲೂಟಿ ಮತ್ತು ಹತ್ಯೆಗಳ ಬಗ್ಗೆ ಪುಸ್ತಕವನ್ನು ಬರೆಯಲಾಗಿದೆ.
ತಸ್ಲೀಮಾ ನಸ್ರೀನ್ ತನ್ನ ಪ್ರಬಂಧಗಳು ಮತ್ತು ಕಾದಂಬರಿಗಳಿಂದ 1990ರ ದಶಕದ ಆರಂಭದಲ್ಲಿ ಬಹಳ ಪ್ರಸಿದ್ಧರಾಗಿದ್ದರು. ನಸ್ರೀನ್ 1994 ರಿಂದ ದೇಶಭ್ರಷ್ಟರಾಗಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸಿದ ನಂತರ ಅವರು 2004ರಲ್ಲಿ ಭಾರತಕ್ಕೆ ಬಂದರು.
2004ರಿಂದ 2007ರವರೆಗೆ ಕೊಲ್ಕತಾದಲ್ಲಿದ್ದ ಅವರು ನಂತರ ಅವರು ಮೂರು ತಿಂಗಳ ಕಾಲ ದೆಹಲಿಗೆ ತೆರಳಿದರು. ಅಲ್ಲಿ ಅವರು ದೈಹಿಕವಾಗಿ ದಾಳಿಗೊಳಗಾದ ನಂತರ ಗೃಹಬಂಧನದಲ್ಲಿ ವಾಸಿಸುತ್ತಿದ್ದರು. ಆದರೆ ಅವರು 2008ರಲ್ಲಿ ಭಾರತವನ್ನು ತೊರೆದು ಅಮೆರಿಕಾಗೆ ತೆರಳಬೇಕಾಯಿತು. ಕೆಲವು ವರ್ಷಗಳ ನಂತರ ನಸ್ರೀನ್ ಮತ್ತೆ ಭಾರತಕ್ಕೆ ಮರಳಿದರು.(ಏಜೆನ್ಸೀಸ್)