

ಲಂಡನ್: ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ದುಃಖ ತರಿಸಬಹುದು, ಮತ್ತೆ ಕೆಲವೊಂದು ಎಂಟರ್ಟೈನ್ಮೆಂಟ್ ನೀಡಬಹುದು, ಕೆಲವು ನಗೆಗಡಲಲ್ಲಿ ನಿಮ್ಮನ್ನು ತೇಲಿಸಬಹುದು, ಇನ್ನು ಕೆಲವು ಆಕ್ರೋಶವನ್ನುಂಟು ಮಾಡಬಹುದು. ಸದ್ಯ ಇಂತಹದ್ದೇ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (Wedding Leave)
ಖಾಸಗಿ ಕಂಪನಿಯೊಂದರ ಸಿಇಒ , ತನ್ನ ಮದುವೆಗಾಗಿ ಎರಡು ದಿನ ರಜೆ ನೀಡಿ ಎಂಬ ಉದ್ಯೋಗಿಯ ಕೋರಿಕೆಯನ್ನು ನಿರಾಕರಿಸಿದ್ದಾರೆ. ಅಲ್ಲದೆ ತಾನು ಏತಕ್ಕಾಗಿ ರಜೆ ನೀಡಲಿಲ್ಲ ಎಂಬ ಕಾರಣವನ್ನು ಸ್ವತಃ ತಾವೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಚರ್ಚೆಯನ್ನು ಹುಟ್ಟುಹಾಕಿದೆ.
ಉದ್ಯೋಗಿ ಮದುವೆಗೆ ರಜೆ ನೀಡದ ಸಿಇಒ ಲಾರೆನ್ ಟಿಕ್ನರ್. UK ಮಾರ್ಕೆಟಿಂಗ್ ಕಂಪನಿಯಾದ ಸ್ಕೇಲ್ ಸಿಸ್ಟಮ್‌ನ ಸಿಇಒ ಆಗಿದ್ದಾರೆ ಎನ್ನಲಾಗಿದೆ. ಲಾರೆನ್ ಟಿಕ್ನರ್ ಮಾಡಿರುವ ಪೋಸ್ಟ್ನಲ್ಲಿ ನಾನು ನನ್ನ ಉದ್ಯೋಗಿಗೆ ಎರಡು ದಿನಗಳ ರಜೆ ನೀಡಲಿಲ್ಲ. ಅವನು ಮದುವೆಯಾಗುತ್ತಿದ್ದಾನೆ ಎಂಬುದು ನನಗೆ ತಿಳಿದಿತ್ತು ಎಂದು ಬರೆದಿದ್ದಾರೆ. ಅಲ್ಲದೆ ತಾನು ರಜೆ ನೀಡಲು ನಿರಾಕರಿಸಿದ್ದು ಏಕೆಂದು ತಿಳಿಸಿದ್ದಾರೆ.
ರಜೆ ಕೇಳಿದ ಉದ್ಯೋಗಿ ಬದಲಿ ಸಿಬ್ಬಂದಿಗೆ ತರಬೇತಿ ನೀಡಿಲ್ಲ. ಅಲ್ಲದೆ ಅವರು ಈಗಾಗಲೇ 2.5 ವಾರಗಳ ರಜೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಕಂಪನಿಯ ಬಳಿ ಎರಡು ಪ್ರಮುಖ ಯೋಜನೆಗಳಿತ್ತು, ಅದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿತ್ತು. ನಾನು ಅವರಿಗೆ ರಜೆಯ ಮೇಲೆ ಹೊರಡುವ ಮೊದಲ ನಿಮ್ಮ ಬದಲಿಯನ್ನು ಹುಡುಕಿ ಹಾಗೂ ನಿಮ್ಮ ದೈನಂದಿನ ಕೆಲಸವನ್ನು ಅವರಿಗೆ ತರಬೇತಿ ನೀಡಿ ಎಂದು ತಿಳಿಸಿದ್ದಾಗಿ ಸಿಇಒ ವಿವರಿಸಿದ್ದಾರೆ.
ಮುಂದಿನ ಬಾರಿ ಅವರು ರಜೆ ತೆಗೆದುಕೊಳ್ಳುವ ಮೊದಲು ಅನುಮತಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಇದಕ್ಕಾಗಿ ಅವರು ಕಂಪನಿಯ ಅನಿಯಮಿತ ರಜೆ ನೀತಿಯನ್ನು ಬಳಸಬಹುದು ಎಂದು ಇನ್ನೊಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಅನಿಯಮಿತ ರಜೆ ನೀತಿಯ ಬಗ್ಗೆ ವಿವರಿಸುತ್ತಾ, ಇದನ್ನು ಫ್ಲೆಕ್ಸಿಬಲ್ ಟೈಮ್ ಆಫ್ ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ ಉದ್ಯೋಗಿಗಳು ತಮ್ಮ ಕೆಲಸದ ಸಮಯವನ್ನು ನಿರ್ಧರಿಸಬಹುದು. ಅವರು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ಹೆಚ್ಚು ರಜೆ ತೆಗೆದುಕೊಂಡವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.
ವೈರಲ್ ಆದ ಪೋಸ್ಟ್ ಅನ್ನು ಇದುವರೆಗೂ 2.9 ಮಿಲಿಯನ್ ಮಂದಿ ವೀಕ್ಷಿಸಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಲಾರೆನ್ ಟಿಕ್ನರ್ ಹೇಳುತ್ತಿರುವುದು ಸರಿಯಲ್ಲ, ಆಕೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ, ಕಚೇರಿಯಲ್ಲಿನ ಕೆಲಸದ ವಾತಾವರಣವನ್ನು ಹಾಳು ಮಾಡುತ್ತಿದ್ದಾಳೆ, ರಜೆ ನೀಡಿ ಕೆಲಸ ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದರೆ ನೀವು ತಂಡವನ್ನು ಉತ್ತಮವಾಗಿ ನಡೆಸುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)