

ಬೆಂಗಳೂರು: 'ರೆಬೆಲ್ ಸ್ಟಾರ್' ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಇಂದು ಅವಿವಾ ಬಿದ್ದಪ್ಪ ಜತೆಗೆ ಆಗಿದೆ. ಮದುವೆ ಮತ್ತು ನಿಶ್ಚಿತಾರ್ಥದ ಬಗ್ಗೆ ಕೇಳಿದಾಗಲೆಲ್ಲ, ಅದೆಲ್ಲ ಸುಳ್ಳು, ನಂಗೇನೂ ಗೊತ್ತಿಲ್ಲ, ಇವೆಲ್ಲ ಮಾಧ್ಯಮದವರ ಸೃಷ್ಟಿ ... ಎಂದು ಹೇಳುತ್ತಲೇ ಅಭಿಷೇಕ್, ಅವಿವಾ ಜತೆಗೆ ಎಂಗೇಜ್ಮೆಂಟ್ ಮುಗಿಸಿಕೊಂಡಿದ್ದಾರೆ. ಸದ್ಯದಲ್ಲೇ ಹಸೆಮಣೆಯನ್ನೂ ಏರಲಿದ್ದಾರೆ.
ಅಂದಹಾಗೆ, 'ಅಲೆ' ಎಂಬ ಚಿತ್ರದಲ್ಲಿ ಅವಿವಾ ಬಿದ್ದಪ್ಪ ನಾಯಕಿಯಾಗಿ ನಟಿಸಿದ್ದರು. ತನುಷ್ ಮತ್ತು ಹರ್ಷಿಕಾ ಪೂಣಾಚ್ಛ ನಾಯಕ-ನಾಯಕಿಯಾಗಿ ನಟಿಸಿದ್ದ ಈ ಚಿತ್ರದಲ್ಲಿ ಅವಿವಾ ದ್ವಿತೀಯ ನಾಯಕಿಯಾಗಿ ನಟಿಸಿದ್ದರು. ಮೊದಲು ಈ ಚಿತ್ರಕ್ಕೆ ಹರ್ಷಿಕಾ ಮಾತ್ರ ನಾಯಕಿಯಾಗಿದ್ದರು. ಆ ನಂತರ ಅವಿವಾ ಸಹ ಚಿತ್ರಕ್ಕೆ ದ್ವಿತೀಯ ನಾಯಕಿಯಾಗಿ ಸೇರ್ಪಡೆಯಾದಾಗ, ಹರ್ಷಿಕಾಗೆ ಬೇಸರವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆ ನಂತರ ವಿವಾದ ತಣ್ಣಗಾಗಿತ್ತು. ಈ ಚಿತ್ರ 2013ರಲ್ಲಿ ಬಿಡುಗಡೆಯಾಗಿ, ಅಷ್ಟು ಸುದ್ದಿಯಾಗದೇ ಮಾಯವಾಯಿತು. ಆ ನಂತರ ಅವಿವಾ ಯಾವುದೇ ಸಿನಿಮಾದಲ್ಲೂ ನಟಿಸಲಿಲ್ಲ.
ಇದಾಗಿ ಕೆಲವು ವರ್ಷಗಳ ನಂತರ ಅಭಿಷೇಕ್, 'ಅಮರ್' ಚಿತ್ರದ ಮೂಲಕ ಹೀರೋ ಆದರು. ನಂತರದ ದಿನಗಳಲ್ಲಿ ಅಭಿಷೇಕ್ ಮತ್ತು ಅವಿವಾ ನಡುವೆ ಪ್ರೇಮಾಂಕುರವಾಗಿ, ಎರಡೂ ಕುಟುಂಬವರು ಒಪ್ಪಿಗೆ ಪಡೆದು, ಇದೀಗ ಮದುವೆಯಾಗುತ್ತಿದ್ದಾರೆ.