

ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗರಿಗೆ ( Australian Women Cricketers ) ಕಿರುಕುಳ ನೀಡಿದ ಆರೋಪಿ ಅಖಿಲ್ ಖಾನ್, ಅಪರಾಧ ಹಿನ್ನೆಲೆಯ ಬಗ್ಗೆ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಆರೋಪಿಯನ್ನು ಇಂದೋರ್ನ ಮೋಸ್ಟ್ ವಾಂಟೆಡ್ ರೌಡಿ ಎಂದು ಪೊಲೀಸರು ಗುರುತಿಸಿದ್ದಾರೆ.
ವಿಶ್ವಕಪ್ ಪಂದ್ಯಕ್ಕಾಗಿ ಇಂದೋರ್ಗೆ ಬಂದಿದ್ದ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಇಬ್ಬರು ಸದಸ್ಯರು ಗುರುವಾರ (ಅ.23) ಬೆಳಗ್ಗೆ 11 ಗಂಟೆ ಸುಮಾರಿಗೆ ತಾವು ತಂಗಿದ್ದ ಹೋಟೆಲ್ ಬಳಿಯ ಕೆಫೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಅವರನ್ನು ಬೈಕ್ನಲ್ಲಿ ಹಿಂಬಾಲಿಸಿದ ಆರೋಪಿ ಅಖಿಲ್, ಕ್ರಿಕೆಟಿಗರ ಬಳಿಗೆ ಬಂದು, ಇಬ್ಬರಲ್ಲಿ ಒಬ್ಬಳನ್ನು ಎಳೆಯಲು ಪ್ರಯತ್ನಿಸಿ, ನಂತರ ವೇಗವಾಗಿ ಅಲ್ಲಿಂದ ಓಡಿಹೋದನು. ಇದಾದ ಸ್ವಲ್ಪ ಸಮಯದ ನಂತರ, ಆತ ಹಿಂತಿರುಗಿ ಬಂದು ಇನ್ನೋರ್ವ ಕ್ರಿಕೆಟಿಗಳನ್ನು ಅಸಭ್ಯವಾಗಿ ಸ್ಪರ್ಶಿಸಿ ಮತ್ತೆ ಪರಾರಿಯಾದನು.
ಅಖಿಲ್ ವರ್ತನೆಯಿಂದ ಗಾಬರಿಗೊಂಡ ಆಟಗಾರ್ತಿಯರು ತಕ್ಷಣ ತಮ್ಮ ಭದ್ರತಾ ಅಧಿಕಾರಿಗೆ ಡ್ಯಾನಿ ಸಿಮ್ಮನ್ಸ್ಗೆ ಮಾಹಿತಿ ನೀಡಿದರು. ಬಳಿಕ ಸಿಮ್ಮನ್ಸ್ ಅವರು ಪೊಲೀಸರಿಗೆ ದೂರು ನೀಡಿದರು. ನಂತರ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಅಖಿಲ್ ವಿರುದ್ಧ ಈಗಾಗಲೇ ಡಜನ್ಗಟ್ಟಲೆ ಪ್ರಕರಣಗಳಿರುವುದು ಗೊತ್ತಾಯಿತು. ಆತನ ಅಪರಾಧ ಹಿನ್ನೆಲೆಯಲ್ಲಿ ದರೋಡೆ, ರಸ್ತೆ ದರೋಡೆ, ಕಳ್ಳತನ, ಕೊಲೆ ಯತ್ನ, ಬೆದರಿಕೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಅಕ್ರಮ ಮದ್ಯ ವ್ಯಾಪಾರದಂತಹ ಪ್ರಕರಣಗಳು ಸೇರಿವೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಅಪರಾಧ) ರಾಜೇಶ್ ದಂಡೋಟಿಯಾ ಮಾತನಾಡಿ, ಆರೋಪಿ ಅಖಿಲ್ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ. ಆತ ಹಲವು ಬಾರಿ ಜೈಲಿಗೆ ಹೋಗಿದ್ದಾನೆ. ಜಾಮೀನು ಅಥವಾ ಪೆರೋಲ್ ಮೇಲೆ ಹೊರಬಂದಾಗಲೆಲ್ಲಾ ಆತ ಹೊಸ ಕೃತ್ಯಗಳನ್ನು ಎಸಗುತ್ತಿದ್ದನು. ಸುಮಾರು ಒಂದು ವರ್ಷದ ಹಿಂದೆ, ಅಖಿಲ್ ಯುವ ದಂಪತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಮಹಿಳೆಯನ್ನು ಅಸಭ್ಯವಾಗಿ ಮುಟ್ಟಲು ಪ್ರಯತ್ನಿಸಿದ್ದನು. ಇನ್ನೊಂದು ಪ್ರಕರಣದಲ್ಲಿ, ಅವನು ಉಜ್ಜಯಿನಿಯಲ್ಲಿ ಪೊಲೀಸರಿಂದ ರೈಫಲ್ಗಳನ್ನು ಕಸಿದುಕೊಂಡು ಗುಂಡು ಹಾರಿಸಲು ಪ್ರಯತ್ನಿಸಿದ್ದನು. ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಆತ ಇತ್ತೀಚೆಗೆ ಇಂದೋರ್ಗೆ ಮರಳಿದ್ದನು ಎಂದು ಹೇಳಿದರು.
ಈ ಘಟನೆಗೆ ಬಿಸಿಸಿಐ ಕೂಡ ಪ್ರತಿಕ್ರಿಯಿಸಿದೆ. ಇದು ತುಂಬಾ ದುರಾದೃಷ್ಟಕರ ಘಟನೆ. ಭಾರತವು ತನ್ನ ಅತಿಥಿಗಳನ್ನು ಗೌರವಿಸುವ ದೇಶವೆಂದು ಹೆಸರುವಾಸಿಯಾಗಿದೆ. ಇಂತಹ ಘಟನೆಗಳು ದೇಶದ ಗೌರವಕ್ಕೆ ಧಕ್ಕೆ ತರುತ್ತವೆ. ಯಾರನ್ನೂ ಈ ರೀತಿ ನಡೆಸಿಕೊಳ್ಳಬಾರದು. ಆಸೀಸ್ ಕ್ರಿಕೆಟಿಗರಿಗೆ ಇದು ಸಂಭವಿಸಿದ್ದಕ್ಕೆ ನಾವು ವಿಷಾದಿಸುತ್ತೇವೆ ಎಂದು ಬಿಸಿಸಿಐ ಹೇಳಿದೆ. (ಏಜೆನ್ಸೀಸ್)